ಮುಖ್ಯಮಂತ್ರಿಗಳ ಕೊಡುಗೆಯಿಂದ ರೈತರಿಗೆ ಅನುಕೂಲ: ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ

17
Published on

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಮೇರೆಗೆ ವರುಣ ಕ್ಷೇತ್ರದಲ್ಲಿ ಕಂದಾಯ ಅದಾಲತ್, ದರ್ಖಾಸ್ ಪೋಡಿ ಅಭಿಯಾನ ಮಾಡುತ್ತಿದ್ದು, ಇದರಿಂದ ಪ್ರತಿಯೊಬ್ಬ ರೈತರಿಗೂ ಅನುಕೂಲವಾಗಲಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಮೈಸೂರು ತಾಲೂಕು ಕೀಳನಪುರದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುದ್ದಗೆರೆ ಮಹಾದೇವಿ ಕಾಲನಿ, ಲಕ್ಷ್ಮೀಪುರ, ಪುಟ್ಟೇಗೌಡನಹುಂಡಿ, ಚಟ್ನಳ್ಳಿ, ಚಟ್ನಳ್ಳಿಪಾಳ್ಯ, ಕೀಳನಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪೌತಿಖಾತೆ ಆಂದೋಲನ, ಪಿಂಚಣಿ ಅದಾಲತ್, ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ರೈತರಿಗೆ ಟಿಲ್ಲರ್ ವಿತರಣೆ, ಆರ್.ಟಿ.ಸಿ. ಮ್ಯುಟೇಷನ್ ಪತ್ರ ವಿತರಣೆ, ಗ್ರಾಮ ಪಂಚಾಯಿತಿಯಿಂದ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.

ಗ್ಯಾರಂಟಿ ಯೋಜನೆಯಲ್ಲಿ ಇನ್ನೂ ಎಷ್ಟು ಜನ ಫಲಾನುಭವಿಗಳು ಉಳಿದುಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆ ಇನ್ನೂ ಎಷ್ಟು ಬಾಕಿ ಬರಬೇಕು, ಅಧಿಕಾರಿಗಳು ಮಾಹಿತಿ ಕೊಡಬೇಕು. ಪೋಡಿ ಅಭಿಯಾನದಲ್ಲಿ ಅರ್ಜಿ ಕೊಟ್ಟಿರುವವರೆಲ್ಲರಿಗೂ ಪರಿಶೀಲಿಸಿ ಮಾಡಿಕೊಡಲಾಗುವುದು. ಅರ್ಜಿ ಹಾಕದವರು ಈಗಲೂ ಅರ್ಜಿ ಕೊಡಿ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

ಕೀಳನಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ ನಮ್ಮ ತಂದೆ ಮತ್ತು ನನಗೆ ಅತಿ ಹೆಚ್ಚು ಮತಗಳನ್ನು ಕೊಟ್ಟು ಆಶೀರ್ವಾದ ಮಾಡಿದ್ದೀರಿ. ನಿಮ್ಮ ಯಾವುದೇ ಕೆಲಸವಿದ್ದರೂ ಹಂತ ಹಂತವಾಗಿ ಮುಖ್ಯಮಂತ್ರಿ ಗಮನಕ್ಕೆ ತಂದು ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ, ಸ್ಮಶಾನಕ್ಕೆ ಜಾಗವಿಲ್ಲ, ರಸ್ತೆ ನಿರ್ಮಾಣ ಮಾಡಿಕೊಡಿ, ನಿವೇಶನ ಕೊಡಿ, ಮನೆ ಕೊಡಿ ಎನ್ನುವುದು ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದರು.

ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್.ವಿಜಯ್, ತಹಸೀಲ್ದಾರ್ ಕೆ.ಎಂ.ಮಹೇಶ್‌ಕುಮಾರ್, ಇ.ಒ.ಕೃಷ್ಣ, ಭೂದಾಖಲೆಗಳ ಸಹಾಯಕ ನಿರ್ದೇಶಕ ಎಚ್.ಮಂಜುನಾಥ್, ಅಗ್ನಿಶಾಮಕ ಇಲಾಖೆಯ ಜಿಲ್ಲಾ ಅಧಿಕಾರಿ ಗುರುರಾಜ್, ಗ್ರಾ.ಪಂ. ಅಧ್ಯಕ್ಷ ನಂಜುಂಡಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಕೆಂಪೀರಯ್ಯ, ಎಂ.ಟಿ.ರವಿಕುಮಾರ್, ತಾ.ಪಂ. ಮಾಜಿ ಸದಸ್ಯೆ ಮಂಜುಳಾ ಮಂಜುನಾಥ್, ಮುಖಂಡರಾದ ವರುಣ ಮಹೇಶ್, ಪಟೇಲ್ ಮಹಾದೇವಪ್ಪ, ಸೋಮಣ್ಣ, ಅಹಿಂದ ಜವರಪ್ಪ, ಜೆಇ ಈರೇಗೌಡ, ಬಿಇಒ ಪ್ರಕಾಶ್, ಪಿಡಿಒ ಮಾಯಪ್ಪ, ಆರ್‌ಐ ಯೋಗೇಂದ್ರಕುಮಾರ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್‌ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net