

ಧಾರವಾಡ: ಕೃಷಿ ಉತ್ಪನ್ನಗಳಿಗೆ ಸ್ವಯಂ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಜತೆಗೆ ಅದನ್ನು ಹಿಡಿತಕ್ಕೆ ತೆಗೆದುಕೊಂಡಾಗ ರೈತರು ಉದ್ಧಾರವಾಗಲು ಸಾಧ್ಯವಿದೆ ಎಂದು ವಾಲ್ಮಿ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ರಾಜೇಂದ್ರ ಪೊದ್ದಾರ ಹೇಳಿದರು.
ತಾಲೂಕಿನ ನಿಗದಿ ಗ್ರಾಮದ ಶ್ರೀಗುರು ಮಡಿವಾಳೇಶ್ವರ ಮಠದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರದ ವತಿಯಿಂದ ರಾಷ್ಟ್ರೀಯ ನೈಸರ್ಗಿಕ ಕೃಷಿ ಮಿಷನ್‌ನಡಿ ಆಯೋಜಿಸಿದ್ದ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶತಮಾನಗಳಿಂದಲೂ ಶೋಷಣೆಗೆ ಒಳಗಾಗಿರುವ ರೈತ ಸಮುದಾಯ ತೀವ್ರ ಸಂಕಷ್ಟದಲ್ಲಿದೆ. ಅನ್ನದಾತರು ಸಂಘಟಿತರಾದರೆ, ಸ್ವಾವಲಂಬಿಯಾಗಲು ಸಾಧ್ಯವಿದೆ. ರೈತರು ಸದೃಢ, ಆರೋಗ್ಯಯುತ, ಲಾಭದಾಯಕ ಒಕ್ಕಲುತನ ಕೈಗೊಳ್ಳಬೇಕಿದೆ. ಎಪಿಎಂಸಿಗಳು, ರೈತರ ಸಹಕಾರಿ ಸಂಸ್ಥೆಗಳು ಸದೃಢಗೊಳ್ಳಬೇಕಿದೆ ಎಂದರು.
ಕೃಷಿ ವಿವಿ ವಿಜ್ಞಾನಿ ಡಾ. ಬಸವರಾಜ ಏಣಗಿ ಮಾತನಾಡಿ, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕಳೆನಾಶಕಗಳ ಬಳಕೆ ಮಿತಿ ಮೀರಿದೆ. ಇದರಿಂದ ರೈತರಿಗೆ ಖರ್ಚು ಹೆಚ್ಚಾಗುವ ಜತೆಗೆ ಇಳುವರಿ ಕುಂಠಿತವಾಗುತ್ತಿದೆ. ಉತ್ತಮ ಆಹಾರ, ಉತ್ತಮ ಆರೋಗ್ಯ, ಉತ್ತಮ ಆದಾಯ ಇಂದಿನ ಅಗತ್ಯ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ನೈಸರ್ಗಿಕ ಕೃಷಿಯ ಪ್ರಮುಖ ಉದ್ದೇಶವಾಗಿದೆ. ರೈತರು ಪರಸ್ಪರ ಸಹಕಾರ ಮನೋಭಾವದಿಂದ ನೈಸರ್ಗಿಕ ಕೃಷಿ ಕೈಗೊಳ್ಳಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸುನಂದಾ ಬಡಿಗೇರ, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ, ಡಾ. ರಾಜೇಂದ್ರ ಪೊದ್ದಾರ, ಕೃಷಿ ವಿವಿ ವಿಜ್ಞಾನಿ ಡಾ. ಬಸವರಾಜ ಏಣಗಿ, ಧಾರವಾಡ ಮಾವು ಬಳಗದ ಅಧ್ಯಕ್ಷ ಸುಭಾಸ ಆಕಳವಾಡಿ, ನಾಗರಾಜ ತಿಮ್ಮಾಪುರ, ದ್ಯಾಮಣ್ಣ ರೇವಣ್ಣವರ, ಕೃಷಿ ಅಧಿಕಾರಿ ಮಹದೇವ ಸರಶೆಟ್ಟಿ, ಸಹಾಯಕ ತೋಟಗಾರಿಕೆ ಅಧಿಕಾರಿ ಮಹಾಂತೇಶ ಯಮಕನಮರಡಿ, ಸಾವಯವ ಕೃಷಿಕ ಭೀಮಪ್ಪ ಬಾಲಗೌಡ್ರ, ರೈತ ಮುಖಂಡ ಚನ್ನಪ್ಪ ಜಗದಪ್ಪನವರ, ಪ್ರಜ್ವಲ ಸಾಲಗಟ್ಟಿ ಅವರನ್ನು ಗ್ರಾಮದ ರೈತರ ವತಿಯಿಂದ ಸನ್ಮಾನಿಸಲಾಯಿತು.
ರೈತರಾದ ಷಣ್ಮುಖ ಹಳಿಯಾಳ, ಮಹದೇವ ಹಳಿಯಾಳ, ಬಾಳಪ್ಪ ಕರ್ಚಗಟ್ಟಿ, ಪ್ರಕಾಶ ಜೋಡಳ್ಳಿ, ಈರಪ್ಪ ಸಿಗನಳ್ಳಿ, ಪರಮೇಶ್ವರ ಯಡಳ್ಳಿ, ಇಲ್ಮುದ್ದೀನ್ ಮೊರಬ, ವಿಶ್ವನಾಥ ಹಳಿಯಾಳ, ನೂರಾರು ರೈತರು, ಕೃಷಿ ವಿವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.