ಕೊಬ್ಬರಿ ಮಾರಾಟ ನೋಂದಣಿಗೆ ಜಾಗರಣೆ ಇದ್ದ ರೈತರು

05-.kkr1((3-24
ಕಿಕ್ಕೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಿಕೊಳ್ಳಲು ಸೋಮವಾರ ರಾತ್ರಿ ಜಾಗರಣೆ ಇದ್ದರು.
Published on

ಕಿಕ್ಕೇರಿ: ಬೆಂಬಲ ಬೆಲೆಯಲ್ಲಿ ಕೊಬ್ಬರಿ ಮಾರಾಟಕ್ಕೆ ನೋಂದಣಿ ಮಾಡಿಸಲು ರೈತರು ಸೋಮವಾರ ರಾತ್ರಿ ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಜಾಗರಣೆ ಇದ್ದರು.

ಸರ್ಕಾರ ಫ್ರೂಟ್ ಐಡಿ ಮೂಲಕ ರೈತರು ಹೆಸರು ನೋಂದಾಯಿಸಿಕೊಂಡವರ ಉಂಡೆ ಕೊಬ್ಬರಿ ಖರೀದಿಸುವುದಾಗಿ ತಿಳಿಸಿದ ಕಾರಣ ಸೋಮವಾರ ಬೆಳಗ್ಗೆ ರೈತರ ದಂಡು ಜೋರಾಗಿ ತಳ್ಳಾಟ ನೂಕಾಟ ಉಂಟಾಗಿತ್ತು.

ಬೆಳಗ್ಗಿನಿಂದ ಸಂಜೆಯವರೆಗೆ ನೂರು ರೈತರ ಹೆಸರು ನೋಂದಣಿ ಮಾತ್ರ ಮಾಡಿಕೊಳ್ಳಲಾಯಿತು. ಉಳಿಕೆ ರೈತರ ಹೆಸರು ನೋಂದಣಿಗೆ ಸೋಮವಾರ ತಿಳಿಸಿದ ಕಾರಣ ರೈತರು ಗದ್ದಲ ಮಾಡಿದರು. ನಂತರ ಜಾಗಬಿಟ್ಟು ಕದಲದ ರೈತರು ಇಡೀ ರಾತ್ರಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದರು. ಸೊಳ್ಳೆ ಕಾಟ ಲೆಕ್ಕಿಸದೆ, ಆವರಣದಲ್ಲಿ ಇದ್ದ ತರಗು, ಮಣ್ಣಿನ ರಸ್ತೆ ಮೇಲೆ ಮಲಗಿದರು. ಹಲವು ಮಹಿಳೆಯರು ಇಡೀ ರಾತ್ರಿ ಜಾಗರಣೆ ಮಾಡಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡೇ ಗ್ರಾಮಕ್ಕೆ ಮರಳಬೇಕು ಎಂದು ನಿಶ್ಚಯಿಸಿದ್ದರು.

ಸ್ಥಳದಲ್ಲಿದ್ದ 800 ರೈತರಿಗೆ ಟೋಕನ್ ನೀಡಲಾಗಿದ್ದು, ನಿತ್ಯ ಕೇವಲ ನೂರು ಸಂಖ್ಯೆಯಲ್ಲಿ ನೋಂದಣಿಯಾಗುತ್ತಿದ್ದು, ರೈತರಿಗೆ ದೊಡ್ಡ ಸಮಸ್ಯೆಯಾಗಿ ಕಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಫ್ರೂಟ್ ಐಡಿ ಮೂಲಕ ಹೆಸರು ನೋಂದಣಿಗೆ 45 ದಿನ ಗಡುವು ಇದೆ. ಆದರೆ ಇಡೀ ಜಿಲ್ಲೆಗೆ 40 ಸಾವಿರ ಟನ್ ಉಂಡೆ ಕೊಬ್ಬರಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ವರ್ಷ ಕೊಬ್ಬರಿಗೆ ಬೆಲೆ ಇಲ್ಲದೆ ರೈತರು ಬಹುತೇಕ ದಾಸ್ತಾನು ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಕೊಬ್ಬರಿ ಖರೀದಿ ಸಾಮರ್ಥ್ಯ ಅವೈಜ್ಞಾನಿಕ ರೀತಿಯಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಸುಮಾರು 87 ಸಾವಿರ ಟನ್ ಕೊಬ್ಬರಿ ಖರೀದಿಸಲಾಗಿತ್ತು. ಇದು ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿದಂತಾಗಿದೆ. ಸಂಬಂಧಪಟ್ಟವರು ಸರಿಪಡಿಸಬೇಕು. ರೈತರು ನೋಂದಣಿ ಮಾಡಿಸಿಕೊಳ್ಳುವ ಜಾಗದಲ್ಲಿ ಕುಡಿಯಲು ನೀರು, ನೆರಳು, ಶೌಚಗೃಹದ ವ್ಯವಸ್ಥೆಯನ್ನು ಎಪಿಎಂಸಿ ಅಧಿಕಾರಿಗಳು ಮಾಡಿಕೊಡಬೇಕು ಎಂದು ರೈತ ಸಂಘದ ಮುಖಂಡ ನಾರಾಯಣಸ್ವಾಮಿ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net