

ನೆಲಮಂಗಲ: ನಗರದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳು ನಿಗದಿತ ಸಮಯಕ್ಕೆ ಕಚೇರಿಗೆ ಬಾರದ ಹಿನ್ನೆಲೆಯಲ್ಲಿ, ಹೆಸರು ನೋಂದಣಿಗೆ ಗಂಟೆಗಟ್ಟಲೆ ಕಾದು ನಿಂತು ರೈತರು ಬಸವಳಿಯುತ್ತಿದ್ದಾರೆ.
ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಗರದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಕಟ್ಟಡದಲ್ಲಿ ಜಿಲ್ಲಾಡಳಿತ ರಾಗಿ ಖರೀದಿ ಕೇಂದ್ರ ತೆರೆದಿದೆ. ರಾಗಿಯನ್ನು ಮಾರಾಟ ಮಾಡಲು ಮುಂದಾಗಿರುವ ತಾಲೂಕಿನ ನೂರಾರು ರೈತರು ಊಟ, ಉಪಹಾರ ಬಿಟ್ಟು ನೋಂದಣಿಗಾಗಿ ಬೆಳಗ್ಗೆ 8 ಗಂಟೆಗೇ ಬಂದು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಬೆಳಗ್ಗೆ 10ಕ್ಕೆ ತೆರೆಯಬೇಕಿದ್ದ ನೋಂದಣಿ ಕೇಂದ್ರ 11 ಗಂಟೆಯಾದರೂ ತೆರೆಯುತ್ತಿಲ್ಲ. ಅಧಿಕಾರಿಗಳು ಬಾರದಿರುವುದೇ ಇದಕ್ಕೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜ.15ರಿಂದ ತಾಲೂಕಿನಲ್ಲಿ ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಆರಂಭವಾಗಿದೆ. ದೂರದ ಊರುಗಳಿಂದ ಬರುವ ರೈತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ಕಾದು ನಿಲ್ಲುತ್ತಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮುಂದುವರಿಸಿದ್ದಾರೆ. ಅಂಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕಿಸಾನ್ ಸಂಘದ ತಾಲೂಕು ಸಹಕಾರ್ಯದರ್ಶಿ ಎಸ್. ಲಕ್ಷ್ಮೀಕಾಂತ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರೈತರಾದ ರಾಮಕೃಷ್ಣಯ್ಯ, ಎನ್. ಗಂಗಾಧರಯ್ಯ, ಗೋವಿಂದರಾಜು, ಗುರುಮೂರ್ತಿ ಮತ್ತಿತರರು ಇದ್ದರು.
ಕ್ಷಮೆಯಾಚಿಸಿದ ಅಧಿಕಾರಿ: ಕಳೆದ ಶುಕ್ರವಾರದಿಂದ ನೋಂದಣಿ ಕಾರ್ಯ ಆರಂಭವಾಗಿತ್ತು. ರೈತರ ಸಂಖ್ಯೆಯೂ ಕಡಿಮೆ ಇತ್ತು. ಆದರೆ, ಸೋಮವಾರ ಏಕಾಏಕಿ ರೈತರ ಸಂಖ್ಯೆ ಹೆಚ್ಚಾಗಿದೆ. ಕಚೇರಿಗೆ ಬರುವಾಗ ವಾಹನ ಕೈಕೊಟ್ಟಿದ್ದಲ್ಲದೆ, ವಾಹನದಟ್ಟಣೆಯಿಂದಾಗಿ ನೋಂದಣಿ ಕೇಂದ್ರ ತೆರೆಯುವುದು ವಿಳಂಬವಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಇದಕ್ಕಾಗಿ ಅವರಲ್ಲಿ ಕ್ಷಮೆಯಾಚಿಸುವೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ತಾಲೂಕು ಕಿರಿಯ ಸಹಾಯಕ ನಾರಾಯಣ್‌ಮೂರ್ತಿ ತಿಳಿಸಿದರು.