ತೊಗರಿ ಬೆಳೆಯತ್ತ ಚಿತ್ತ ಹರಿಸಿದ ರೈತರು

FotoJet..
Published on

ಜಿ.ನಾಗರಾಜ್​ ಬೂದಿಕೋಟೆ

ಜಿಲ್ಲೆಯ ರೈತರು ರಾಗಿ, ನೆಲಗಡಲೆ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೆಳೆಯುತ್ತಿದ್ದು, ಕಡಿಮೆ ಬಂಡವಾಳ ಹೂಡಿ ದುಪ್ಪಟ್ಟು ಆದಾಯಗಳಿಸಲು ಮುಂದಾಗಿದ್ದಾರೆ.

ಕೋಲಾರ ಜಿಲ್ಲೆಯ ರೈತರು ಹಿಂಗಾರು ಮತ್ತು ಮುಂಗಾರಿನಲ್ಲಿ ಸಾಮಾನ್ಯವಾಗಿ ಮಳೆಯಾಧಾರಿತ ಬೆಳೆಗಳಾದ ರಾಗಿ, ನೆಲಗಡಲೆ, ಸಾಮೆ, ಅವರೆ ಸೇರಿ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಬೆಳೆಗಳಿಗೆ ಖರ್ಚು ಮತ್ತು ಶ್ರಮ ಹೆಚ್ಚಿರುವ ಕಾರಣ ಇತ್ತೀಚೆಗೆ ಕಡಿಮೆ ಬಂಡವಾಳ ಹಾಕಿ ತೊಗರಿ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಈ ಹಿಂದೆ ಕೇವಲ ಅಂತರ್​ ಬೆಳೆಯಾಗಿ ತೊಗರಿಯನ್ನು ಬೆಳೆಯುತ್ತಿದ್ದಂತಹ ರೈತರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಮತ್ತು ಬೆಲೆ ಇರುವುದರಿಂದ ಈಗ ಪೂರ್ಣ ಪ್ರಮಾಣದ ಬೆಳೆಯಾಗಿ ಬೆಳೆಯುತ್ತಿದ್ದು, ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಈ ಬಾರಿ ಜಿಲ್ಲೆಯಲ್ಲಿ ಸುಮಾರು 1,070 ಹೆಕ್ಟರ್​ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದು, ಉತ್ತಮ ಇಳುವರಿ ಪಡೆದಿದ್ದಾರೆ. ಮಾರುಕಟ್ಟೆಯಲ್ಲಿ ಹಸಿ ತೊಗರಿ ಪ್ರತಿ ಕೆಜಿ 50 ರಿಂದ 65 ರೂ.ಗಳವರೆಗೂ ಬೆಲೆ ಇದ್ದು, ಉತ್ತಮ ಆದಾಯ ಗಳಿಸುತ್ತಿದ್ದಾರೆ. ಒಣಗಿಸಿ ಬೇಳೆಯಾಗಿ ಪರಿವರ್ತನೆ ಮಾಡಿದರೆ ಇನ್ನಷ್ಟು ಆದಾಯ ಪಡೆಯಬಹುದಾಗಿದೆ.

ಜಿಲ್ಲೆಯ ರೈತರು ಕೇವಲ ಬೇಳೆ ಹಾಗೂ ಕಾಳುಗಳಿಗೆ ಮಾತ್ರವಲ್ಲದೆ ಬಿತ್ತನೆ ಬೀಜ ಉತ್ಪಾದನೆಗೂ ಸೈ ಎಂದಿದ್ದಾರೆ. ರಾಜ್ಯ ಬೀಜ ನಿಗಮದಿಂದ ಬಿಆರ್​ಜಿ 1 ಮತ್ತು ಬಿಆರ್​ಜಿ 5 ಎಂಬ ತಳಿಯ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ಪಡೆದ ರೈತರು ಬೆಳೆೆಯನ್ನು ಬೆಳೆದು ಮತ್ತೆ ನಿಗಮಕ್ಕೆ ಬೀಜವನ್ನು ಬಿತ್ತನೆಗಾಗಿ ಪೂರೈಕೆ ಮಾಡಿ ದುಪ್ಪಟ್ಟು ಆದಾಯ ಪಡೆಯುತ್ತಿದ್ದಾರೆ. ಈ ವರ್ಷ 107 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಿ ಸುಮಾರು 700 ಕ್ವಿಂಟಾಲ್​ನಷ್ಟು ಬೀಜವನ್ನು ನಿಗಮಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕಳೆದ ವರ್ಷ ಪ್ರತಿ ಕ್ವಿಂಟಾಲ್​ ತೊಗರಿಯನ್ನು 13,150 ರೂ.ಗಳಿಗೆ ನಿಗಮವು ರೈತರಿಂದ ಖರೀದಿ ಮಾಡಿತ್ತು. ಈ ವರ್ಷ 15 ಸಾವಿರ ರೂ. ದರ ನಿಗದಿ ಮಾಡಬಹುದು ಎಂದು ನಿರೀಸಲಾಗಿದೆ.

"ಬೀಜೋತ್ಪಾದನೆ ಮಾಡುವ ಸಲುವಾಗಿ ರೈತರಿಗೆ ನಿಗಮ ಬೀಜವನ್ನು ನೀಡಿ ಮತ್ತೆ ಉತ್ಪಾದನೆ ಮಾಡಿದಂತಹ ಬೀಜವನ್ನು ರೈತರಿಂದ ನೇರವಾಗಿ ಉತ್ತಮ ಬೆಲೆಗೆ ಖರೀದಿ ಮಾಡಲಾಗುತ್ತದೆ. ತೋಟದಲ್ಲಿ ಬೆಳೆ ಇರುವಂತಹ ಸಮಯದಲ್ಲಿ ನಿಗಮದಿಂದ ಸುಮಾರು ಮೂರ್ನಾಲ್ಕು ಬಾರಿ ತೋಟಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ. ರೈತರಿಂದ ಖರೀದಿ ಮಾಡಿದ ಉತ್ತಮ ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಮತ್ತೆ ರೈತರಿಗೆ ಬಿತ್ತನೆಗಾಗಿ ವಿತರಣೆ ಮಾಡಲಾಗುತ್ತದೆ."

- ಡಾ.ಎಂ.ಮಲ್ಲಿಕ್​, ಸಹಾಯಕ ವ್ಯವಸ್ಥಾಪಕ ಬೀಜ ನಿಗಮ ಕೋಲಾರ

"ರಾಜ್ಯ ಬೀಜ ನಿಗಮದಿಂದ ಬಿತ್ತನೆ ಬೀಜ ಖರೀದಿಸಿ 10 ಎಕರೆ ಪ್ರದೇಶದಲ್ಲಿ ತೊಗರಿಯನ್ನು ಸಾಲು ಪದ್ಧತಿಯಲ್ಲಿ ಬೆಳೆಯಲಾಗಿದ್ದು, ಎಕರೆಗೆ 5 ಕ್ವಿಂಟಾಲ್​ನಷ್ಟು ಇಳುವರಿ ಬಂದಿದೆ. ಬೀಜವನ್ನು ನಿಗಮಕ್ಕೆ ನೇರವಾಗಿ ಸುಮಾರು 15,200 ರೂ.ಗಳಿಗೆ ಮಾರಾಟ ಮಾಡುತ್ತಿದ್ದೇನೆ. ತೊಗರಿ ಬೆಳೆ ಹೆಚ್ಚು ಶ್ರಮ ಹಾಗೂ ಖರ್ಚು ಅಲ್ಲದ ಬೆಳೆಯಾಗಿರುವ ಕಾರಣ ಉತ್ತಮ ಆದಾಯ ಪಡೆಯಬಹುದು."

- ರಾಜಾರೆಡ್ಡಿ, ರೈತ, ದಿನ್ನಕೊತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net