

ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ
ಕಳೆದ ವಾರ ಸುರಿದ ಹದ ಮಳೆಯಿಂದ ತಾಲೂಕಿನ ಬಹುತೇಕ ರೈತರು ಗದ್ದೆಗಳನ್ನು ಸ್ವಚ್ಛ ಮಾಡುತ್ತಿದ್ದರೆ, ಮತ್ತೆ ಕೆಲವು ರೈತರು ಒಣ ಬಿತ್ತನೆ ಆರಂಭಿಸಿದ್ದಾರೆ.
ತಾಲೂಕಿನ ಶೇ. 70ರಷ್ಟು ಪ್ರದೇಶದಲ್ಲಿ ರೈತರು ಮಳೆಯಾಶ್ರಿತವಾಗಿ ಭತ್ತ ಬೆಳೆಯುತ್ತಾರೆ. ಆದ್ದರಿಂದ ತಾಲೂಕನ್ನು ಭತ್ತದ ಕಣಜವೆಂದು ಕರೆಯಲಾಗುತ್ತದೆ. ಇಂತಹ ಪ್ರದೇಶದಲ್ಲೀಗ ಸಮರ್ಪಕ ಮಳೆಯಾಗದ ಕಾರಣ ಭತ್ತ ಬಿತ್ತನೆಗೆ ಪರದಾಡುವಂತಾಗಿದೆ.
ತಾಲೂಕಿನಲ್ಲಿ ಅತಿಕ್ರಮಣ ಭೂಮಿ ಸೇರಿದಂತೆ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗುತ್ತದೆ. 5 ಸಾವಿರ ಹೆಕ್ಟೇರ್‌ನಲ್ಲಿ ಗೋವಿನಜೋಳ ಹಾಗೂ 20 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಹಾಗೂ 6 ಸಾವಿರ ಎಕರೆಯಲ್ಲಿ ಕಬ್ಬು ಬೆಳೆ ಬೆಳೆಯಲಾಗುತ್ತದೆ.
ಪ್ರತಿವರ್ಷ ಮೇ ಅಂತ್ಯದೊಳಗೆ ತಾಲೂಕಿನ ಬಹುತೇಕ ರೈತರು ಒಣ ಬಿತ್ತನೆ ಮಾಡುತ್ತಿದ್ದರು. ಆದರೆ, ಈ ವರ್ಷ ಹದ ಮಳೆಯಾಗದ ಕಾರಣ ರೈತರು ತಮ್ಮ ಭೂಮಿಗಳನ್ನು ಹಸನು ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಕಳೆದ ವಾರ ಸುರಿದ ಹದ ಮಳೆಯಿಂದ ತಾಲೂಕಿನ ರೈತರು ಗದ್ದೆಗಳನ್ನು ಹಸನು ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಹಸನು ಮಾಡಿಕೊಂಡು ಒಣ ಬಿತ್ತನೆ ಆರಂಭಿಸಿದ್ದಾರೆ.
ತಾಲೂಕಿನ ನಂದಿಗಟ್ಟ, ಹುನಗುಂದ, ಬಾಚಣಕಿ, ಇಂದುರ, ಚವಡಳ್ಳಿ, ಸಾಲಗಾಂವ, ಚಿಗಳ್ಳಿ, ಕಾತೂರ, ಪಾಳಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಒಣ ಬಿತ್ತನೆ ಕಾರ್ಯ ಆರಂಭವಾಗಿದೆ. ಪಾಳಾ ಹಾಗೂ ಸಾಲಗಾಂವ ಗ್ರಾಪಂ ವ್ಯಾಪ್ತಿಗಳಲ್ಲಿ ಅತಿ ಹೆಚ್ಚು ಒಣಬಿತ್ತನೆ ಮಾಡಲಾಗಿದೆ. ತಾಲೂಕಿನಲ್ಲಿ ಇದೂವರೆಗೂ ಶೇ. 18ರಷ್ಟು ಪ್ರದೇಶದಲ್ಲಿ ಒಣ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ಕಳೆದ ವರ್ಷದಂತೆ ಈ ವಷರ್ರ್ವೂ ಉತ್ತಮ ಮಳೆ ಸುರಿದರೆ ಭತ್ತದ ಬೆಳೆಗೆ ಹೆಚ್ಚು ಅನುಕೂಲಕರವಾದ ವಾತಾವರಣವಿರುತ್ತದೆ. ಆದ್ದರಿಂದ ರೈತರು ಇದೀಗ ಮಳೆಯನ್ನು ನಂಬಿ ಒಣ ಬಿತ್ತನೆ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಭತ್ತದ ಬೀಜದ ಒಣ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ತಾಲೂಕಿನಲ್ಲಿ ಶೇ. 18ರಷ್ಟು ಒಣ ಬಿತ್ತನೆ ಕಾರ್ಯ ಮುಗಿದಿದೆ. ಇನ್ನೂ ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ಬಿತ್ತನೆ ಬೀಜವನ್ನು ರೈತರು ಖರಿದಿಸುತ್ತಿದ್ದಾರೆ.ಎಂ.ಎಸ್. ಕುಲಕರ್ಣಿ ಸಹಾಯಕ ಕೃಷಿ ನಿರ್ದೇಶಕ ಮುಂಡಗೋಡ