ಹೂವಿನ ಬೆಳೆ ಹರಗಿದ ರೈತರು

20 lxr 4
Published on

ಲಕ್ಷ್ಮೇಶ್ವರ: ಕೋವಿಡ್ ಸೋಂಕಿನ 2ನೇ ಅಲೆ ಪ್ರಭಾವದಿಂದಾಗಿ ಹಬ್ಬ ಹರಿದಿನ, ಮದುವೆ, ಸಭೆ, ಸಮಾರಂಭಗಳಿಗೆ ನಿರ್ಬಂಧ ಹೇರಿರುವುದರಿಂದ ಹೂವಿಗೆ ಬೆಲೆ ಸಿಗದಂತಾಗಿ ಬೆಳೆ ನಾಶಪಡಿಸುವ ಕಾರ್ಯದಲ್ಲಿ ರೈತರು ತೊಡಗಿದ್ದಾರೆ.

ಲಕ್ಷ್ಮೇಶ್ವರ ಪಟ್ಟಣ, ಮುನಿಯನ ತಾಂಡಾ, ಶ್ಯಾಬಳಾ, ಸೂರಣಗಿ, ಉಳ್ಳಟ್ಟಿ, ದೊಡ್ಡೂರ, ಸೂರಣಗಿ, ಶಿಗ್ಲಿ ಮತ್ತಿತರ ಕಡೆ ನೂರಾರು ಎಕರೆ ಪ್ರದೇಶದಲ್ಲಿ ಹೂವು ಬೆಳೆಯಲಾಗಿದೆ. ತಾಲೂಕಿನ ಮುನಿಯನ ತಾಂಡಾದ ಹತ್ತಾರು ಕುಟುಂಬಗಳು ತಮ್ಮ ಜಮೀನಿನಲ್ಲಿ ಅರ್ಧ ಎಕರೆ, 1 ಎಕರೆ, 2 ಎಕರೆಯಷ್ಟು ಗಲಾಟೆ, ಸೇವಂತಿ, ಕಾಕಡ, ಅಬಾಲಿ, ಸುಗಂಧಿ ಇನ್ನಿತರ ಹೂವನ್ನು ವರ್ಷದುದ್ದಕ್ಕೂ ಬರುವಂತೆ ಬೆಳೆಯುತ್ತಾರೆ. ಬೆಳೆದ ಹೂವನ್ನು ಲಕ್ಷ್ಮೇಶ್ವರದ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ವರ್ಷ ಕರೊನಾ ಸಂಕಷ್ಟ, ಅತಿವೃಷ್ಟಿ ಕಾರಣದಿಂದ ಹೂವಿನ ಬೆಳೆಯಿಂದ ಕೈ ಸುಟ್ಟುಕೊಂಡಿದ್ದರು. ಇದೀಗ ಕರೊನಾ 2ನೇ ಅಲೆಯ ಕಾರಣದಿಂದಾಗಿ ಹೂವಿಗೆ ಬೇಡಿಕೆ ಕಡಿಮೆಯಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆ ಫಸಲು ನೀಡುತ್ತಿದ್ದರೂ, ಅನಿವಾರ್ಯವಾಗಿ ನಾಶಪಡಿಸುತ್ತಿದ್ದಾರೆ.

ಎರಡು ಎಕರೆ ಜಮೀನಿನಲ್ಲಿ 50 ಸಾವಿರ ರೂಪಾಯಿ ಖರ್ಚು ಮಾಡಿ ಗಲಾಟೆ ಹೂವು ಬೆಳೆದಿದ್ದೇನೆ. ಆದರೆ, ಕಳೆದ 3 ತಿಂಗಳಿಂದ ನಿತ್ಯ 50 ಕೆಜಿ ಹೂವು ಮಾರಾಟ ಮಾಡಿದರೂ ಮೂರ್ನಾಲ್ಕು ನೂರು ರೂಪಾಯಿ ಕೈಗೆ ಬರುತ್ತಿತ್ತು. ಇದು ಕೂಲಿ ಆಳು, ಖರ್ಚು ವೆಚ್ಚಕ್ಕೂ ಸರಿದೂಗದಂತಾಗಿದೆ. ಕರೊನಾದಿಂದ ಎಲ್ಲ ಹಬ್ಬ, ಸಭೆ, ಜಾತ್ರೆಗಳನ್ನು ಸಂಕ್ಷಿಪ್ತವಾಗಿ ಆಚರಿಸುತ್ತಿದ್ದು, ಹೂವಿಗೆ ಬೆಲೆ ಇಲ್ಲದಂತಾಗಿದೆ. ಅಲ್ಲದೆ, ಕಳೆದ ವರ್ಷ ಹೂವು ಬೆಳೆಗಾರರಿಗೆ ಸರ್ಕಾರ ನೀಡಿದ 25 ಸಾವಿರ ರೂಪಾಯಿ ಸಹಾಯಧನವೂ ಬರಲಿಲ್ಲ. ಯುಗಾದಿ ಹಬ್ಬಕ್ಕೆ 2 ದಿನ ಮಾತ್ರ ಒಂದಿಷ್ಟು ದರ ಸಿಕ್ಕಿದೆ. 6 ತಿಂಗಳ ಕಾಲ ಕಷ್ಟಪಟ್ಟು ದುಡಿದರೂ ಪ್ರಯೋಜನವಾಗದಂತಾಗಿದೆ. ಆದ್ದರಿಂದ ಹೂವಿನ ಬೆಳೆ ನಾಶಪಡಿಸಿ ಬೇರೆ ಬೆಳೆ ಬೆಳೆಯಲು ತೀರ್ವನಿಸಿದ್ದೇನೆ.| ರವಿ ಲಮಾಣಿ ಹೂವು ಬೆಳೆಗಾರ, ಮುನಿಯನ ತಾಂಡಾಕಳೆದ ವರ್ಷ ಕರೊನಾದಿಂದ ಹಾನಿ ಅನುಭವಿಸಿದ ಹೂವು ಬೆಳೆಗಾರರಿಗೆ ಬೆಳೆ ದರ್ಶಕದಲ್ಲಿ ದಾಖಲಾದ ಬೆಳೆಗಳಿಗೆ ಸಹಾಯಧನ ಲಭಿಸಿದೆ. ದಾಖಲೆ ಹೊಂದಾಣಿಕೆಯಾದ ರೈತರಿಗೆ ಮಾತ್ರ ಪರಿಹಾರ ಸಿಕ್ಕಿದೆ. ಪ್ರಸಕ್ತ ವರ್ಷ ಬೆಳೆಹಾನಿ ಪರಿಹಾರ ಕೊಡುವ ಬಗ್ಗೆ ಇಲಾಖೆಯಿಂದ ಯಾವುದೇ ನಿರ್ಧಾರವಾಗಿಲ್ಲ. ರೈತರು ಪರಿಸ್ಥಿತಿಯನ್ನರಿತು ವಿವಿಧ ಬೆಳೆ ಬೆಳೆಯಬೇಕು.| ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net