

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ 3397 ರೈತರು 68129 ಕ್ವಿಂಟಾಲ್ (ಜೂನ್ ಅಂತ್ಯಕ್ಕೆ) ರಾಗಿಯನ್ನು ಮಾರಿದ್ದಾರೆ.
ಕಳೆದ 2023-24 ನೇ ಸಾಲಿನ ಡಿಸೆಂಬರ್ ನಲ್ಲಿ ನೋಂದಣಿ ಪ್ರಕ್ರಿಯೆ ಘೋಷಿಸಿದ್ದು ಈ ಭಾಗದಲ್ಲಿ 4267 ರೈತರು 96383 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಇದುವರೆಗೆ 3227 ರೈತರಿಂದ ಖರೀದಿಸಿದ 64061.50 ಕ್ವಿಂಟಾಲ್ ರಾಗಿಗೆ 24,63,80,529 ರೂಗಳನ್ನು ಪಾವತಿಸಲಾಗಿದೆ. ಉಳಿದಂತೆ 170 ರೈತರಿಗೆ 4068 ಕ್ವಿಂಟಾಲ್ ಖರೀದಿಗೆ 1,56,45,528 ರೂಗಳನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ಮಾಹಿತಿ ನೀಡಿದೆ.
ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಕನಿಷ್ಠ ಬೆಂಬಲ ಯೋಜನೆಯಡಿ ರ್ನಿದಿಷ್ಟ ಉತ್ಪನ್ನವನ್ನು ಖರೀದಿಸುತ್ತದೆ. ಅದರಂತೆ ಕ್ವಿಂಟಾಲ್ ರಾಗಿಗೆ 3845 ರೂ ಬೆಂಬಲ ಬೆಲೆ ಘೋಷಿಸಿತ್ತು.
ಜಿಲ್ಲೆಯಲ್ಲಿ ಹೆಚ್ಚಿಗೆ ಬೆಳೆಗಳಲ್ಲಿ ರಾಗಿ ಸಹ ಪ್ರಮುಖವಾದುದು. ಮುಂಗಾರು ಅವಧಿಗೆ ಸರಾಸರಿ ಬರೋಬ್ಬರಿ 42,630 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದು ಹಾಗೆಯೇ ಹಿಂಗಾರಿನಲ್ಲೂ ಹೆಚ್ಚಿಗೆ ಬೆಳೆಯಲಾಗುತ್ತದೆ. ಕಳೆದ 2023 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ತೀವ್ರ ಮಳೆಯ ಅಭಾವದಿಂದ ಬಹುತೇಕ ರೈತರು ಬೆಳೆ ನಷ್ಟ ಅನುಭವಿಸಿದ್ದು ರಾಗಿಯೊಂದೇ ಬೆಳೆ 30075 ಹೆಕ್ಟೇರ್ ಪ್ರದೇಶದಲ್ಲಿ ನಾಶವಾಗಿತ್ತು. ಇಳುವರಿ ಕುಸಿತದಿಂದ ಮಾರುಕಟ್ಟೆಯಲ್ಲಿ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು ಇದಕ್ಕೆ ಪೈಪೋಟಿಗೆ ಅನುಗುಣವಾಗಿ ರೈತರಿಂದ ರಾಗಿಯನ್ನು ಖರೀದಿಸಲಾಗಿದೆ.