ಮೆಕ್ಕೆಜೋಳ ಬೀಜಕ್ಕೆ ಮುಗಿಬಿದ್ದ ರೈತರು

SRT SEEDS
Published on

ಶಿರಹಟ್ಟಿ: ಮೋಡ ಕವಿದ ವಾತಾವರಣದ ಮಧ್ಯೆ ಕಳೆದೆರಡು ದಿನಗಳಿಂದ ಬಿತ್ತನೆಗೆ ಹದವರ್ತಿ ಮಳೆಯಾಗಿದ್ದು, ರೈತರು ಆಶಾವಾದಿಗಳಾಗಿದ್ದಾರೆ. ಮಳೆಯಿಲ್ಲದೆ ಕೆಲ ದಿನಗಳಿಂದ ಆತಂಕದಲ್ಲಿದ್ದ ಕೃಷಿಕರ ಮುಖದಲ್ಲಿ ವಿಶ್ವಾಸದ ಗೆರೆ ಮೂಡಿದೆ. ತಾಲೂಕಿನ ವಿವಿಧ ಗ್ರಾಮಗಳ ರೈತರು ಮುಂಗಾರು ಹಂಗಾಮಿನ ಮೆಕ್ಕೆಜೋಳ, ತೊಗರಿ, ಹೆಸರು ಬೀಜ ಖರೀದಿಸಲು ಸೋಮವಾರ ಶಿರಹಟ್ಟಿ ರೈತ ಸಂಪರ್ಕ ಕೇಂದ್ರಕ್ಕೆ ಮುಗಿಬಿದ್ದಿದ್ದರು.

ತಿಂಗಳ ಹಿಂದೆಯೇ ಬಿತ್ತನೆಗೆ ಹೊಲ ಹಸನು ಮಾಡಿಕೊಂಡು ಮಳೆರಾಯನ ಆಗಮನಕ್ಕೆ ಕಾದೂ ಕಾದು ಸುಸ್ತಾದ ರೈತರು ಹೆಸರು ಬಿತ್ತನೆ ಹಂಗಾಮು ಮುಗಿದಿದ್ದರಿಂದ ಮೆಕ್ಕೆ ಜೋಳ, ತೊಗರಿ, ಹತ್ತಿ ಬೀಜ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ. ತಾಲೂಕಿನ ಛಬ್ಬಿ, ಮಾಗಡಿ, ಮಜ್ಜೂರ, ಕಡಕೋಳ, ವರವಿ, ಜಲ್ಲಿಗೇರಿ, ಖಾನಾಪುರ ಮತ್ತಿತರ ಗ್ರಾಮಗಳ ರೈತರು ಸೋಮವಾರ ಬೆಳಗಾಗುತ್ತಲೇ ಬೀಜ ಖರೀದಿಸಲು ಶಿರಹಟ್ಟಿ ರೈತ ಸಂಪರ್ಕ ಕೇಂದ್ರದ ಎದುರು ಜಮಾಯಿಸಿದ್ದಲ್ಲದೇ ಸರದಿ ಸಾಲಿನಲ್ಲಿ ನಿಂತು ಒಬ್ಬರ ಮೇಲೊಬ್ಬರು ಮುಗಿಬಿದ್ದು ಬೀಜ ಖರೀದಿಸಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡು ಬಂದಿತು.

ವಾಡಿಕೆ ಪ್ರಕಾರ ಈ ಸಮಯಕ್ಕೆ 192 ಮಿ.ಮೀ.ಮಳೆ ಆಗಬೇಕಾಗಿತ್ತು. ಆದರೆ, 94 ಮಿ.ಮೀ. ಆಗಿದೆ. ತಾಲೂಕಿನಲ್ಲಿ 32,960 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಕೊರತೆಯಿಂದಾಗ ಈವರೆಗೆ 960 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಸದ್ಯ ರೈತ ಸಂಪರ್ಕ ಕೇಂದ್ರದಲ್ಲಿ ಮೆಕ್ಕೆ ಜೋಳ, ಕಂಠಿಶೇಂಗಾ, ತೊಗರಿ ಬೀಜಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. 110 ಕ್ವಿಂಟಾಲ್ ಮೆಕ್ಕೆಜೋಳ, 40 ಕ್ವಿಂಟಾಲ್ ಹೆಸರು, 16 ಕ್ವಿಂಟಾಲ್ ತೊಗರಿ ಬೀಜಗಳು ಮಾರಾಟಕ್ಕೆ ಲಭ್ಯ ಇವೆ. ಈ ವರ್ಷ ರೈತರು ಖರೀದಿಸುವ ಪ್ರತಿಯೊಂದು ಬೀಜದ ಪ್ಯಾಕೆಟ್‌ಅನ್ನು ಎಂಐಎಸ್ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡಬೇಕಾಗಿದ್ದರಿಂದ ಬೀಜ ವಿತರಣೆಯಲ್ಲಿ ತಡವಾಗುತ್ತಿದೆ. ರೈತರ ಬೇಡಿಕೆಗೆ ಅನುಸಾರವಾಗಿ ಬೀಜಗಳು ಲಭ್ಯವಿದ್ದು, ರೈತರು ಇಲಾಖೆ ಸೂಚಿಸಿದ ಅಗತ್ಯ ದಾಖಲೆಗಳೊಂದಿಗೆ ಶಾಂತಿ ರೀತಿಯಿಂದ ಬೀಜ ಖರೀದಿಸಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ರಮೇಶ ಲಮಾಣಿ ಕೋರಿದ್ದಾರೆ.

ಈ ಮೊದಲು ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಕೆಲಸ ಸಲೀಸಾಗಿ ನಡೆಯುತ್ತಿತ್ತು. ಆದರೆ, ಏಕಾಏಕಿ ಪರ್ಯಾಯ ವ್ಯವಸ್ಥೆ ಮಾಡಿ ಕಿಟಕಿ ಮೂಲಕವೇ ಹಣ ತುಂಬಿ, ರಸೀದಿ ಮತ್ತು ಬೀಜ ಪಡೆದುಕೊಳ್ಳುವ ವ್ಯವಸ್ಥೆ ಮಾಡಿದ್ದರಿಂದ ರೈತರಿಗೆ ತೊಂದರೆಯಾಗಿದೆ. ಸರದಿ ಸಾಲಿನಲ್ಲಿ ನಿಲ್ಲಲು ಸ್ಥಳಾವಕಾಶದ ಕೊರತೆಯಿಂದ ಬೀಜ ಖರೀದಿಗೆ ಆಗಮಿಸಿದ ನೂರಾರು ರೈತರು ಹರಸಾಹಸ ಪಡುವಂತಾಗಿದೆ. ಕೃಷಿ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಎಂಐಎಸ್ ಸ್ಕ್ಯಾನಿಂಗ್ ವಿಧಾನ ತೀವ್ರ ಗತಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು. ಶ್ರೀನಿವಾಸ ಮರಡ್ಡಿ, ಶ್ರೀಕಾಂತ ಲಮಾಣಿ, ರೈತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net