ಬಾರದ ನೀರು ‘ಸಿಗದ ಪರಿಹಾರ’ ಏತ ನೀರಾವರಿ ಯೋಜನೆಗೆ ಜಮೀನು ಕಳೆದುಕೊಂಡ ರೈತರು ಕಂಗಾಲು

29MDG1 ETA NIRAVARI
Published on


ಸಂತೋಷ ಮುರಡಿ ಮುಂಡರಗಿ
ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬರುವ ಹಮ್ಮಿಗಿ- ಮುಂಡವಾಡ ಏತ ನೀರಾವರಿ ಯೋಜನೆಗಾಗಿ ಭೂಮಿ ಕಳೆದುಕೊಂಡಿರುವ ಅನೇಕ ರೈತರಿಗೆ ಪರಿಹಾರ ದೊರಕದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಕಾಲುವೆಗಳಲ್ಲಿ ಹೂಳು ತುಂಬಿಕೊಂಡು ಜಮೀನಿಗೆ ನೀರು ಕೂಡ ಲಭ್ಯವಾಗುತ್ತಿಲ್ಲ.


ತಾಲೂಕಿನ ಹಮ್ಮಿಗಿ ಸಮೀಪ ಕರ್ನಾಟಕ ನೀರಾವರಿ ನಿಗಮ ನಿಯಮಿತದಿಂದ 6 ಗ್ರಾಮಗಳ ಜಮೀನುಗಳಿಗೆ ಕಾಲುವೆ ಮೂಲಕ ನೀರಾವರಿ ಸೌಲಭ್ಯ ಕಲ್ಪಿಸಲು ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ 2012ರಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಗಿ-ಮುಂಡವಾಡ ಏತ ನೀರಾವರಿ ಯೋಜನೆ ಆರಂಭಗೊಂಡಿದೆ. ಹಮ್ಮಿಗಿ ಸಮೀಪದಲ್ಲಿ ಮುಖ್ಯ ಕಾಲುವೆಗೆ ಹೊಂದಿಕೊಂಡು ನಿರ್ವಿುಸಿರುವ ಪಂಪ್​ಹೌಸ್ ಮೂಲಕ ಕಾಲುವೆಗೆ ನೀರು ಹರಿಸುವ ಕೆಲಸ ಮಾಡಲಾಗುತ್ತಿದೆ.


ಪಂಪ್​ಹೌಸ್​ನಿಂದ ಹಮ್ಮಿಗಿ ಶಾಖಾ ಕಾಲುವೆ ಹಾಗೂ ಮುಂಡವಾಡ ಶಾಖಾ ಕಾಲುವೆ ನಿರ್ಮಾಣ ಮಾಡಿದ್ದು, ಈ ಕಾಲುವೆಗಳ ಮೂಲಕ ಒಟ್ಟು 2115 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ. ಹಮ್ಮಿಗಿ, ಗುಮ್ಮಗೋಳ, ಜಾಲವಾಡಗಿ, ಮುಂಡವಾಡ, ಬಿದರಹಳ್ಳಿ, ವಿಠ್ಠಲಾಪುರ ಗ್ರಾಮಗಳು ಯೋಜನೆಗೆ ಒಳಪಡುತ್ತವೆ. ಮಳೆಗಾಲ ಸಂದರ್ಭದಲ್ಲಿ ಜೂನ್​ನಿಂದ ಡಿಸೆಂಬರ್​ವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ. ಯೋಜನೆ ಪ್ರಾರಂಭಗೊಂಡಾಗಿನಿಂದ ಬಿದರಹಳ್ಳಿ, ವಿಠ್ಠಲಾಪುರ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಮುಂಡವಾಡ ಗ್ರಾಮದ ಭಾಗಕ್ಕೂ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಕಾಲುವೆಯಲ್ಲಿ ಹೂಳು ತುಂಬಿಕೊಂಡು ಜಾಲಿಗಿಡಗಳು ಬೆಳೆದಿವೆ.


ಹಮ್ಮಿಗಿ-ಮುಂಡವಾಡ ಏತ ನೀರಾವರಿ ಯೋಜನೆಗಾಗಿ ಹಮ್ಮಿಗಿ ಶಾಖಾ ಕಾಲುವೆ ಹಾಗೂ ಮುಂಡವಾಡ ಶಾಖಾ ಕಾಲುವೆ ನಿರ್ವಣಕ್ಕಾಗಿ 6 ಗ್ರಾಮಗಳ ರೈತರ 246 ಎಕರೆ 37ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪೈಕಿ ಇನ್ನೂ 128 ಎಕರೆ 27 ಗುಂಟೆ ಕ್ಷೇತ್ರಕ್ಕೆ ಪರಿಹಾರ ಹಣ ನೀಡಬೇಕಾಗಿದೆ. ಪರಿಹಾರ ಹಣ ನೀಡುವಂತೆ ಹಲವು ವರ್ಷಗಳಿಂದ ರೈತರು ನೀರಾವರಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ, ಪರಿಹಾರ ದೊರೆಕಿಲ್ಲ. ಅನೇಕ ಬಾರಿ ಹೋರಾಟ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ರೈತರು ತಹಸೀಲ್ದಾರ್ ಕಚೇರಿ ಮುಂದೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ ಮನವಿ ಕೂಡ ಸಲ್ಲಿಸಿದ್ದಾರೆ. ಹಲವು ಭಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಪರಿಹಾರ ದೊರಕುತ್ತಿಲ್ಲವೆಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಯೋಜನೆಗೆ ಭೂಮಿ ಕಳೆದುಕೊಂಡ ರೈತರು ಪರಿಹಾರಕ್ಕಾಗಿ 12 ವರ್ಷದಿಂದ ಅಲೆದಾಡಿದರೂ, ಪ್ರತಿಭಟನೆ ನಡೆಸಿದರೂ ಈವರೆಗೂ ಸ್ಪಂದಿಸಿ ಪರಿಹಾರ ವಿತರಿಸುವ ಕೆಲಸ ಆಗಿಲ್ಲ. ಮುಂಡವಾಡ, ಬಿದರಹಳ್ಳಿ, ವಿಠ್ಠಲಾಪುರ ಭಾಗಕ್ಕೆ ಸರಿಯಾಗಿ ನೀರು ತಲುಪುವುದಿಲ್ಲ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಿಲ್ಲವಾಗಿದೆ. ಅಧಿಕಾರಿಗಳು ಸ್ಪಂದಿಸಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಯುವಂತೆ ಮಾಡಬೇಕು.| ಬಸವರಾಜ ಗುರ್ನಳ್ಳಿ ಮುಂಡವಾಡ ರೈತ

ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಿದ್ದು, ಆದಷ್ಟು ಬೇಗ ವಿತರಿಸುವಂತ ಕೆಲಸ ಮಾಡಲಾಗುವುದು. ಹಾಗೆಯೇ ಕಾಲುವೆಯಲ್ಲಿ ನೀರು ಹರಿಯದ ಭಾಗಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ. ಕಾಲುವೆಯಲ್ಲಿ ಹೂಳು ತೆಗೆಯುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ರಮೇಶ ಎಚ್. ಎಇಇ, ಸಿಂಗಟಾಲೂರು ಏತ ನೀರಾವರಿ ಯೋಜನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net