

ಖಂಡೇನಹಳ್ಳಿ ಬಸವರಾಜ್ ಹಿರಿಯೂರು: ಯಾತಕ್ಕೆ ಮಳೆ ಹೋದವೋ ಶಿವ ಶಿವಾ, ಲೋಕ ತಲ್ಲಣಿಸುತ್ತಾವೋ… ಬರದ ಬವಣೆಯನ್ನು ಬಿಡಿಸಿಡುವ ಈ ಹಾಡು ಪ್ರಸ್ತುತ ಬಯಲು ಸೀಮೆಗೂ ಅನ್ವಯಿಸುವಂತಿದೆ.
ಮುಂಗಾರು ಆರಂಭದಲ್ಲಿ ಅಬ್ಬರಿಸಿ, ಮಾಯವಾದ ಮಳೆರಾಯ, ಜುಲೈ-ಆಗಸ್ಟ್ ನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಅನ್ನದಾತನ ಕಣ್ಣಲ್ಲಿ ಕಣ್ಣೀರು ಕೂಡ ಬತ್ತಿದೆ. ಈ ವಾರದಲ್ಲಿ ವರುಣ ಕೃಪೆ ತೋರಿದರೆ ಮಾತ್ರ ಶೇಂಗಾ ಬೆಳೆ ಚೇತರಿಕೆ ಕಾಣಲಿದೆ.
ಬಿತ್ತನೆ ಕುಂಠಿತ: ಬಯಲುಸೀಮೆಯಲ್ಲಿ ಶೇಂಗಾ ಪ್ರಮುಖ ಮಳೆಯಾಶ್ರಿತ ಬೆಳೆ. ಬಿತ್ತನೆ ಪ್ರದೇಶ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ಪ್ರಸಕ್ತ ಮುಂಗಾರು ಹಂಗಾಮಿನ ಬಿತ್ತನೆ ಶೇ.20 ಮೀರಿಲ್ಲ, ಎಲ್ಲೆಲ್ಲೂ ಬರದ ಛಾಯೆ ಆವರಿಸಿದೆ. ಸಮೃದ್ಧ ಮಳೆಯಾಗಿ ಉತ್ತಮ ಬೆಳೆ ಸಿಗಬಹುದು ಎಂಬ ಅನ್ನದಾತನ ನಿರೀಕ್ಷೆ ಹುಸಿಯಾಗಿದೆ. ಮುಂಗಾರಿನ ಹೊಸ್ತಿಲಲ್ಲಿ ಆರ್ಭಟಿಸಿದ್ದ ಮಳೆ, ಬಿತ್ತನೆ ಸಮಯದಲ್ಲಿ ಕೈಕೊಟಿತ್ತು. ಕೃಷಿ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ.
ಮೇವಿಗೂ ಹಾಹಾಕಾರ: ಜಾನುವಾರುಗಳ ಮೇವಿಗೂ ಹಾಹಾಕಾರ ಎದುರಾಗಿದೆ. ಕಳೆದ ವರ್ಷ ಉತ್ತಮ ಮಳೆಯಾದ ಪರಿಣಾಮ ಸದ್ಯಕ್ಕೆ ಜನ-ಜಾನುವಾರುಗಳ ಕುಡಿವ ನೀರಿಗೆ ಸಮಸ್ಯೆ ಇಲ್ಲ. ಮಳೆಯಾಶ್ರೀತ ಪ್ರದೇಶದಲ್ಲಿ ಶೇಂಗಾ, ಜೋಳ, ತೊಗರಿ, ಹುರುಳಿ, ಸಜ್ಜೆ, ಸೂರ್ಯಕಾಂತಿ ಇತರ ವಾಣಿಜ್ಯ ಬೆಳೆಗಳು ತೇವಾಂಶ ಕೊರತೆಯಿಂದ ಒಣಗುತ್ತಿದ್ದು, ವರುಣ ಕೃಪೆ ತೋರಿದರೆ ಮಾತ್ರ ಮಳೆಯಾಶ್ರಿತ ವಾಣಿಜ್ಯ ಬೆಳೆಗಳಿಗೆ ಜೀವ ಕಳೆ ಬರಲಿದೆ.
ಬಿತ್ತನೆ ಗುರಿ: ನೀರಾವರಿ ಪ್ರದೇಶದ ವಿಸ್ತರಣೆ, ವರುಣನ ಕಣ್ಣಾಮುಚ್ಚಾಲೆ ಆಟ, ರೈತರ ವಲಸೆ, ಜಾನುವಾರು ಸಾಕಾಣಿಕೆ ಇಳಿಮುಖ, ದುಬಾರಿ ಕೂಲಿ, ರಸಗೊಬ್ಬರ ಬೆಲೆ ಹೆಚ್ಚಳ, ಕೃಷಿ ಕೂಲಿ ಕಾರ್ಮಿಕರ ಕೊರತೆ… ಈ ರೀತಿ ವಿವಿಧ ಕಾರಣಕ್ಕೆ ಶೇಂಗಾ ಬಿತ್ತನೆ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 2020 ರಲ್ಲಿ 21 ಸಾವಿರ ಹೆಕ್ಟೇರ್ ಮಳೆಯಾಶ್ರಿತ ಭೂಮಿಯಲ್ಲಿ ಶೇಂಗಾ ಬಿತ್ತನೆ ಮಾಡಲಾಗುತ್ತಿತ್ತು. 2022 ರಲ್ಲಿ 14 ಸಾವಿರ ಹೆಕ್ಟೇರ್, 2023 ರಲ್ಲಿ 11 ಸಾವಿರ ಹೆಕ್ಟೇರ್‌ಗೆ ಇಳಿದಿದೆ.
ತೊಗರಿ, ಸೂರ್ಯಕಾಂತಿ, ಜೋಳ, ಹುರುಳಿ, ಸಜ್ಜೆ, ಸಿರಿಧಾನ್ಯಗಳ ಬಿತ್ತನೆ ಪ್ರಮಾಣ 2019 ರಲ್ಲಿ 47 ಸಾವಿರ ಹೆಕ್ಟೇರ್, 2021-2022 ಕ್ಕೆ 40 ಸಾವಿರ ಹೆಕ್ಟೇರ್, 2023 ರಲ್ಲಿ 35 ಸಾವಿರ ಹೆಕ್ಟೇರ್ ಗೆ ಕುಸಿದಿದೆ.
ಭದ್ರೆ ವಿವಿ ಸಾಗರ ಒಡಲು ಸೇರಿದ್ದು, ವೇದಾವತಿ, ಸುವರ್ಣಮುಖಿ ನದಿ ಪಾತ್ರದಲ್ಲಿ ಸರಣಿ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಾಣ, ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿ ವಿಸ್ತರಣೆ, ಅಂತರ್ಜಲ ಹೆಚ್ಚಳದಿಂದ ಮಳೆಯಾಶ್ರಿತ ಭೂಮಿಯಲ್ಲಿ ಅಡಕೆ, ಟೊಮ್ಯಾಟೋ, ದಾಳಿಂಬೆ, ಪಪ್ಪಾಯಿ, ಬಾಳೆ, ಡ್ರಾೃಗನ್ ಫ್ರೂಟ್, ಶ್ರೀಗಂಧ, ತರಕಾರಿ ಬೆಳೆಗಳ ಕೃಷಿಯಿಂದ ಶೇಂಗಾ ಬಿತ್ತನೆ ಕುಂಠಿತವಾಗಿದೆ.
ಮಳೆ ಪ್ರಮಾಣ ಇಳಿಮುಖ: ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿಲ್ಲ. ಜುಲೈ-ಆಗಸ್ಟ್ ತಿಂಗಳಲ್ಲಿ 254 ಮಿಮೀ ವಾಡಿಕೆ ಮಳೆ ಬದಲಾಗಿ 169 ಮಿಮೀ ಮಾತ್ರ ಮಳೆಯಾಗಿದೆ.
ಸಹಾಯಕ ಕೃಷಿ ನಿರ್ದೇಶಕಿ ಉಲ್ಫತ್ ಜೈಬಾ ಹೇಳಿಕೆ: ಹಿರಿಯೂರು ತಾಲೂಕಿನಲ್ಲಿ ನೀರಾವರಿ-ತೋಟಗಾರಿಕೆ ಬೆಳೆ ಪ್ರದೇಶದ ವಿಸ್ತರಣೆಯಿಂದ ಮಳೆಯಾಶ್ರಿತ ಬೆಳೆಗಳ ಬಿತ್ತನೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. 21 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗುತ್ತಿದ್ದ ಶೇಂಗಾ 10 ಹೆಕ್ಟೇರ್‌ಗೆ ಕುಸಿದಿದೆ, ವಾರದಲ್ಲಿ ವರುಣ ಕೃಪೆ ತೋರಿದರೆ ಮಾತ್ರ ಶೇಂಗಾ ಬೆಳೆಗಾರರಿಗೆ ವರದಾನವಾಗಲಿದೆ.
ಹರಿಯಬ್ಬೆ ಕೃಷಿಕ ಹನುಮಂತರಾಯ ಹೇಳಿಕೆ: ಶೇಂಗಾ ಬೆಳೆ ಪ್ರಸಕ್ತ ವರ್ಷವೂ ಕೈ ಸೇರುವ ನಿರೀಕ್ಷೆ ಹುಸಿಯಾಗಿದೆ. ದಶಕದಿಂದ ಬೆಳೆ ನಷ್ಟ, ಮಳೆ ಕೊರತೆ, ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಆಳುವ ಸರ್ಕಾರಗಳು ಬೆಳೆಗಾರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ದುರಂತ.
ರೈತ ಮುಖಂಡ ಸಿದ್ದರಾಮಣ್ಣ ಹೇಳಿಕೆ: ರಾಜ್ಯ ಸರ್ಕಾರ ಹಿರಿಯೂರು ತಾಲೂಕನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಹಾಗೂ ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್ ಕೊಡಬೇಕು, ಮಳೆ ಕೊರತೆ, ಬೆಳೆ ನಷ್ಟ, ಶೇಂಗಾ ಬೆಳೆಗಾರರ ಸಂಕಷ್ಟದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ವಾಸ್ತವತೆ ಕುರಿತು ಸರ್ಕಾರದ ಗಮನಕ್ಕೆ ತರಬೇಕು.
ಮಾಜಿ ಶಾಸಕಿ ಕೆ.ಪೂರ್ಣಿಮಾ ಹೇಳಿಕೆ: ಬಯಲು ಸೀಮೆ ಶೇಂಗಾ ಬೆಳೆಗಾರರು ಸಂಕಷ್ಟದಲ್ಲಿದ್ದು ಸರ್ಕಾರ ರೈತರ ನೆರವಿಗೆ ಧಾವಿಸಬೇಕು, ಶೇಂಗಾ ಬೆಳೆಗೆ ವಿಶೇಷ ಪ್ಯಾಕೇಜ್, ಸೂಕ್ತ ಬೆಂಬಲ ಬೆಲೆ ಘೋಷಿಸಿ ಬಡವರ ಬಾದಾಮಿ/ಸಾಂಪ್ರಾದಾಯಿಕ ಬೆಳೆಯನ್ನು ಸಂರಕ್ಷಿಸಬೇಕು ಇಲ್ಲದಿದ್ದರೆ ಬಯಲುಸೀಮೆಯಲ್ಲಿ ಶೇಂಗಾ ಕಣ್ಮರೆಯಾಗಲಿದೆ.