ಬೆಂಬಲ ಬೆಲೆ ನಂಬಿದ ರೈತರಿಗೆ ಸಂಕಷ್ಟ

ಕುರುಗೋಡು ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಕಟಾವು ಹಂತಕ್ಕೆ ಬಂದಿರುವುದು.
ಕುರುಗೋಡು ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದ ಬೆಳೆ ಕಟಾವು ಹಂತಕ್ಕೆ ಬಂದಿರುವುದು.
Published on

ಕುರುಗೋಡು: ತಾಲೂಕಿನಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದ ಮೆಕ್ಕೆಜೋಳ ದರ ಕುಸಿದಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರು ಕಂಗಾಲಾಗಿದ್ದಾರೆ.

ಕುರುಗೋಡು, ವದ್ದಟ್ಟಿ, ಮದಿರೆ, ಸಿದ್ದಮ್ಮನಹಳ್ಳಿ, ಕಲ್ಲುಕಂಬ, ಬಾದನಹಟ್ಟಿ, ಕೋಳೂರು, ದಮ್ಮೂರು ಸೇರಿದಂತೆ ಅನೇಕ ಗ್ರಾಮಗಳ ರೈತರು ಕಳೆದ ಬಾರಿ ಮೆಣಸಿನಕಾಯಿ ಬೆಳೆಗೆ ವಿವಿಧ ರೋಗ ಹರಡಿ, ದುಬಾರಿ ಔಷಧ ಹಾಗೂ ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸಿದ್ದರು. ಇದಕ್ಕೆ ಪರ್ಯಾಯ ಬೆಳೆ ಬೆಳೆಯಲು ಹಾಗೂ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಘೋಷಣೆಯಿಂದ ತಾಲೂಕಿನಲ್ಲಿ ಒಟ್ಟು 2,420 ಎಕರೆ ಪ್ರದೇಶದಲ್ಲಿ ಮೆಕ್ಕೆಜೋಳವನ್ನು ರೈತರು ಬೆಳೆದಿದ್ದಾರೆ.

ಜುಲೈ ಕೊನೆಯಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಈಗ ಕಟಾವು ಹಂತಕ್ಕೆ ಬಂದಿದೆ. ರೈತರು ಈಗಾಗಲೇ ಬಿತ್ತನೆ ಬೀಜ, ಔಷಧ, ಕಟಾವು ವೆಚ್ಚ ಸೇರಿ ಎಕರೆಗೆ 15 ಸಾವಿರ ರೂ. ಖರ್ಚು ಮಾಡಿದ್ದಾರೆ. ಸಕಾಲಕ್ಕೆ ಸುರಿದ ಮಳೆಯಿಂದ ಕೀಟ, ರೋಗ ಬಾಧೆ ಹತೋಟಿಗೆ ಬಂದ ಪರಿಣಾಮ ಎಕರೆ 25 ರಿಂದ 30 ಕ್ವಿಂಟಾಲ್ ಫಸಲಿನ ನಿರೀಕ್ಷೆಯಲ್ಲಿದ್ದರು. ಆದರೆ, ದಿಢೀರ್ ದರ ಕುಸಿತದಿಂದ ಖರೀದಿದಾರರು ಒಂದು ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಕೇವಲ 1800 ರೂ.ನಂತೆ ಖರೀದಿಸುತ್ತಿದ್ದಾರೆ. ಇದರಿಂದ ರೈತರು ಹಾಕಿದ ಬಂಡವಾಳಕ್ಕಾಗಿಯೂ ಪರಿತಪಿಸುವಂತಾಗಿದೆ.

ಮದ್ಯವರ್ತಿಗಳಿಗೆ ಲಾಭ: ಕಳೆದ ಹಂಗಾಮಿನಲ್ಲಿ ಮೆಕ್ಕೆಜೋಳ ಫಸಲು ಪ್ರತಿ ಕ್ವಿಂಟಾಲ್‌ಗೆ 2,100 ರಿಂದ 2,200 ರೂ. ವರೆಗೆ ಮಾರಾಟವಾಗಿತ್ತು. ಕೇಂದ್ರ ಸರ್ಕಾರ ಪ್ರಸಕ್ತ ವರ್ಷ 2,400 ರೂ. ಬೆಂಬಲ ಬೆಲೆ ಘೋಷಿಸಿದೆ. ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದರೂ ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಖರೀದಿಸದಿರುವುದು ರೈತರ ಸಂಕಷ್ಟಕ್ಕೆ ಕಾರಣವಾಗಿದೆ. ಸಕಾಲಕ್ಕೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಇದನ್ನೇ ಬಂಡವಾಳ ಮಾಡಿಕೊಳ್ಳುವ ದಲ್ಲಾಳಿಗಳು ರೈತರಿಂದ ಬೆಂಬಲ ಬೆಲೆಗಿಂತ ಕಡಿಮೆ ಹಣಕ್ಕೆ ಪಡೆದು ಲಾಭ ಮಾಡಿಕೊಳ್ಳಲಿದ್ದಾರೆ. ಇದರಿಂದ ರೈತರು ನಷ್ಟ ಅನುಭವಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net