ಹೆಸ್ಕಾಂ ಮುಖ್ಯ ಕಚೇರಿವರೆಗೆ ವಿಜಯಪುರ ರೈತರ ಪಾದಯಾತ್ರೆ

New Farmer
Published on

ಹುಬ್ಬಳ್ಳಿ : ರೈತ ಭಾರತ ಪಕ್ಷ ನೇತೃತ್ವದಲ್ಲಿ ಹಲವಾರು ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಸೆ. 19 ರಿಂದ ವಿಜಯಪುರದಿಂದ ಜಾಥಾ ಆರಂಭಿಸಿದ್ದು, ಸೋಮವಾರದಂದು ನಗರಕ್ಕೆ ಆಗಮಿಸಿ, ಹೆಸ್ಕಾಂ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ರೈತರಿಗೆ 12 ತಾಸು ತ್ರಿ ಫೇಸ್ ವಿದ್ಯುತ್ ಪೂರೈಸಬೇಕು, ಸುಟ್ಟ ಟಿಸಿಯನ್ನು 48 ಗಂಟೆಗಳಲ್ಲಿ ಬದಲಾಯಿಸಬೇಕು, ತೋಟದ ಮನೆಗಳಿಗೆ ರಾತ್ರಿ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಿಂಗಲ್ ಫೇಸ್ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಆಗ್ರಹಿಸಿದರು.

ರೈತರಿಗೆ ನೀಡಿದ ಸುಟ್ಟ ಟಿಸಿಗಳು ಕೇವಲ 15 ರಿಂದ ಒಂದು ತಿಂಗಳ ಒಳಗಡೆ ಮತ್ತೆ ಸುಡುತ್ತಿದ್ದು, ಅದರ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು. ಹೆಸ್ಕಾಂ ಅಧಿಕಾರಿಗಳ ನೇಮಕದಲ್ಲಿ ಆಗಿರುವ ಭ್ರಷ್ಟಾಚಾರ ಕುರಿತು ತನಿಖೆಯಾಗಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ 3,564 ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ಖಾಯಂಗೊಳಿಸಬೇಕು. ಇಲಾಖೆಯ ಕಾಮಗಾರಿಗಳನ್ನು ಅಧಿಕಾರಿಗಳೆ ಮಾಡಿಸುತ್ತಿದ್ದು, ಇದು ಇಲಾಖೆಯ ನಷ್ಟಕ್ಕೆ ಮೂಲ ಕಾರಣವಾಗಿದೆ. ಹಲವಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ, ಹೆಸ್ಕಾಂಗೆ ಲಾಭ ಬರುವ ರೀತಿ ಕ್ರಮ ತೆಗೆದುಕೊಳ್ಳಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ವಿಜಯಪುರದಿಂದ ನಿತ್ಯ 20 ಕಿಮೀ ಪಾದಯಾತ್ರೆ ಮಾಡಿದ ರೈತರು, ಮಾರ್ಗದಲ್ಲಿ ಬರುವ ಸ್ಥಳಗಳಲ್ಲಿ ರೈತರಿಗೆ, ಸಾರ್ವಜನಿಕರಿಗೆ ಹೆಸ್ಕಾಂನಲ್ಲಿ ಆಗುತ್ತಿರುವ ಸಮಸ್ಯೆಗಳ ಕರ ಪತ್ರ ವಿತರಿಸಿ, ಜಾಗೃತಿ ಮೂಡಿಡಿದರು.

ಪಾದಯಾತ್ರೆಯಲ್ಲಿ ರಾಷ್ಟ್ರಾಧ್ಯಕ್ಷ ಮುತ್ತಪ್ಪ ಹಿರೇಕುಂಬಿ, ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಕೋಲಕಾರ, ಸುಭಾಸ ಹರಿವಾಳ, ಹುಸೇನ ನಾಟೇಕರ, ಹಾಜಿಮಲನ್ ನಾಟೇಕರ, ರಾಜು ದುಮಾಳೆ, ಮನೋಹರ ಹಾದಿಮನಿ, ಕಲ್ಲಪ್ಪ ಬ್ಯಾಕೊಡ, ನಿಂಗಪ್ಪ ಬಾಗೇವಾಡಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net