ವಿದ್ಯುತ್ ಮಾರ್ಗಕ್ಕೆ ವಿರೋಧ, ಹೋರಾಟ ಹಾದಿ ತುಳಿದ ರೈತರು

former
Published on

ಬಂಟ್ವಾಳ: ಪಡುಬಿದ್ರೆಯಿಂದ ದಕ್ಷಿಣ ಕನಡ ಜಿಲ್ಲೆ ಮೂಲಕ ಕಾಸರಗೋಡಿಗೆ ಹಾದುಹೋಗುವ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿಸಿ ಬಂಟ್ವಾಳ ತಾಲೂಕಿನ ನಾಲ್ಕು ಗ್ರಾಮಗಳ ಮುಖ್ಯದ್ವಾರಗಳಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು, ಅನ್ಯರಿಗೆ ಮಾರಾಟಕ್ಕಿಲ್ಲ’ ಎನ್ನುವ ಹೋರಾಟದ ನಾಮಫಲಕ ಅಳವಡಿಸುವ ಚಳುವಳಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ, 400 ಕೆ.ವಿ.ಆತಂಕಿತ ಸಂತ್ರಸ್ತರ ಹೋರಾಟ ಸಮಿತಿಯ ಸಹಕಾರದೊಂದಿಗೆ ಚಳುವಳಿ ಆಯೋಜಿಸಲಾಗಿತ್ತು. ಸೊರ್ನಾಡು ಹಾಲು ಉತ್ಪಾದಕ ಸಂಘದ ಕಚೇರಿಯಿಂದ ಪ್ರತಿಭಟನಕಾರರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾಧ್ಯಕ್ಷ ಒಸ್ವಾಲ್ಡ್ ಫರ್ನಾಂಡಿಸ್ ಮಾತನಾಡಿದರು. ತಾಲೂಕು ಸಮಿತಿ ಅಧ್ಯಕ್ಷ ಪ್ರೇಮಾನಾಥ ಶೆಟ್ಟಿ ಬಾಳ್ತಿಲ, ಹೋರಾಟ ಸಮಿತಿ ಸಂಚಾಲಕ ರೊಯ್ ಕಾರ್ಲೊ, ಸದಸ್ಯರಾದ ಕೊನ್ಸೆಪ್ಟ ಡೇಸಾ, ಖಾದರ್ ಅರಳ, ದೇವಪ್ಪ ಕುಲಾಲ್ ಮೊದಲಾದವರಿದ್ದರು.

ದ.ಕ.ದಲ್ಲಿಯೂ ಟ್ಯಾಕ್ಟರ್ ರ‌್ಯಾಲಿ!: ದೆಹಲಿಯಲ್ಲಿ ಬೀಡುಬಿಟ್ಟಿರುವ ರೈತರು ಹೋರಾಟ ತೀವ್ರಗೊಳಿಸುವ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆ ಬೆಂಬಲವಾಗಿ ಎಲ್ಲ ರೈತರು ಬಿ.ಸಿ.ರೋಡಿನಿಂದ ವಾಹನ ಜಾಥಾದ ಮೂಲಕ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಟ್ಯಾಕ್ಟರ್‌ನಲ್ಲಿ ಸಾಗುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿ ನಮ್ಮ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ತಲುಪಿಸುವ ಹೋರಾಟವನ್ನು ನಡೆಸಲಿದ್ದೇವೆ ಎಂದು ರವಿಕಿರಣ್ ಪುಣಚ ಹೇಳಿದರು.

ರಮಾನಾಥ ರೈ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧಾರ: ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿರುವ ವಿರುದ್ಧ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಹೋರಾಟ ನಡೆಸಲು ಸಮಾನಮನಸ್ಕರ ಹೋರಾಟ ಸಮಿತಿ ಸಭೆ ಬಿ.ಸಿ.ರೋಡಿನಲ್ಲಿ ಮಂಗಳವಾರ ನಿರ್ಧರಿಸಿದೆ. ಹೋರಾಟದ ರೂಪುರೇಷೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಯೋಜನೆ ದುಷ್ಪರಿಣಾಮವನ್ನು ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಜನರಿಗೆ ಮನವರಿಕೆ ಮಾಡಿ ಯೋಜನೆಯನ್ನು ಕೈ ಬಿಡುವವರೆಗೆ ತೀವ್ರ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ಪ್ರಮುಖರಾದ ಬೇಬಿ ಕುಂದರ್, ಮಹಮ್ಮದ್ ಶರೀಫ್, ಪಿ.ಎ.ರಹೀಂ, ಎಂ.ಎಸ್.ಮಹಮ್ಮದ್, ಬಿ.ಶೇಖರ್, ಪದ್ಮನಾಭ ರೈ, ಸುದೀಪ್ ಕುಮಾರ್ ಶೆಟ್ಟಿ, ಅಬ್ಬಾಸ್ ಅಲಿ, ಸಂಜೀವ ಪೂಜಾರಿ, ಜೆಸಿಂತಾ ಡಿಸೋಜ, ಮಲ್ಲಿಕಾ ಶೆಟ್ಟಿ, ಜಯಂತಿ ಪೂಜಾರಿ, ಪ್ರಭಾಕರ ದೈವಗುಡ್ಡೆ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net