ಕೃಷಿ ಮಸೂದೆಗಳಿಂದ ಕ್ರಾಂತಿಕಾರಿ ಬದಲಾವಣೆ

cm
Published on

ಚಿಕ್ಕಮಗಳೂರು: ನೂತನ ಕೃಷಿ ಮಸೂದೆಗಳು ಪರಿಣಾಮಕಾರಿಯಾಗಿದ್ದು, ಕ್ರಾಂತಿಕಾರಿ ಬದಲಾವಣೆಯಾಗಲಿದೆ. ಇದರಿಂದ ರಾಜ್ಯದಲ್ಲಿ ಪಾಳು ಬಿದ್ದಿರುವ 11 ಸಾವಿರ ಹೆಕ್ಟೇರ್ ಪ್ರದೇಶವನ್ನು ಕೃಷಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಿಲ್ಲಾ ಆಟದ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 1,006 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕೃಷಿ ಯೋಗ್ಯವಲ್ಲದ ಬಂಜರು ಮತ್ತು ಒಣ ಭೂಮಿಯನ್ನು ಕೃಷಿಯೇತರ ಕೈಗಾರಿಕಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ರೈತರ ಜೀವನಮಟ್ಟ ಸುಧಾರಿಸಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತಾಗಲು ಪ್ರಯತ್ನಿಸಲಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆ ಮುಂದುವರಿಯಲಿದೆ. ರಾಜ್ಯದ ರೈತ ಸಮುದಾಯಕ್ಕೆ ಅನುಕೂಲವಾಗಬೇಕೆನ್ನುವ ದೃಷ್ಟಿಯಿಂದ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಆಶಯದಂತೆ 2020-22ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡಿಯೇ ತೀರುತ್ತೇನೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನ್ನದಾತರ ಹಿತರಕ್ಷಣೆಗೆ ಸದಾ ಬದ್ಧವಾಗಿದ್ದು, ರೈತ ಸಮುದಾಯ ಯಾವುದೇ ಅಪಪ್ರಚಾರಗಳಿಗೆ ಕಿವಿಕೊಡಬಾರದು ಎಂದು ಕೋರಿದರು.

ಕೃಷಿ, ಆರೋಗ್ಯ ಮತ್ತು ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ವಲಯಗಳಾಗಿದ್ದು, 2030ರೊಳಗೆ ನೀತಿ ಆಯೋಗದ ಗುರಿ ಸಾಧಿಸುವ ಜತೆಗೆ ಉತ್ತಮ ಸಮಾಜ, ಸಮೃದ್ಧ ಕರ್ನಾಟಕದ ಗುರಿ ಬಿಜೆಪಿ ಸರ್ಕಾರದ್ದು. ಎಲ್ಲ ವರ್ಗಗಳಿಗೆ ಅನುಕೂಲ ಕಲ್ಪಿಸಿ ಜೀವನ ಮಟ್ಟ ಸುಧಾರಿಸಲು ಸರ್ಕಾರ ಗುರಿ ಹಾಕಿಕೊಂಡಿದೆ. ಅತಿವೃಷ್ಟಿ, ಕರೊನಾದಂತಹ ಸಮಸ್ಯೆ ನಡುವೆಯೂ ಚಿಕ್ಕಮಗಳೂರು ಕ್ಷೇತ್ರಕ್ಕೆ 10,630 ಕೋಟಿ ರೂ. ಅನುದಾನ ನೀಡಲಾಗಿದೆ. ಇದಲ್ಲದೆ ಇನ್ನಷ್ಟು ಬೇಡಿಕೆಗಳನ್ನು ಇಡಲಾಗಿದ್ದು ಬಜೆಟ್​ನಲ್ಲಿ ಹಣಕಾಸಿನ ಇತಿಮಿತಿಗಳನ್ನು ಗಮನಿಸಿ ಆದ್ಯತೆ ಮೇಲೆ ಅವುಗಳನ್ನು ಈಡೇರಿಸುವುದಾಗಿ ತಿಳಿಸಿದರು.

ಸಚಿವರಾದ ವಿ.ಸೋಮಣ್ಣ, ಭೈರತಿ ಬಸವರಾಜ್, ಡಾ. ಸುಧಾಕರ್, ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ನರಸಿಂಹನಾಯಕ್, ಉಪಸಭಾಪತಿ ಎಸ್.ಎಲ್.ಧಮೇಗೌಡ, ಡಿ.ಎನ್.ಜೀವರಾಜ್ ಇತರರಿದ್ದರು.

ಭರವಸೆ ಈಡೇರಿಸುತ್ತಿದ್ದೇವೆ: ಚಿಕ್ಕಮಗಳೂರಿನ ಬಹುದಿನಗಳ ಕನಸಾಗಿದ್ದ ವೈದ್ಯಕೀಯ ಕಾಲೇಜು ಸೇರಿ ಜಿಲ್ಲೆಯ 5 ಪ್ರಮುಖ ಯೋಜನೆಗಳಿಗೆ ಮಂಜೂರಾತಿ ಕೊಡಿಸಬೇಕು ಎನ್ನುವುದು ನನ್ನ ಪ್ರಯತ್ನವಾಗಿತ್ತು. ವೈದ್ಯಕೀಯ ಕಾಲೇಜು, ಆಸ್ಪತ್ರೆ ಉನ್ನತೀಕರಣ ಯೋಜನೆಗೆ ಮುಖ್ಯಮಂತ್ರಿ ಸಹಕಾರದಿಂದ ಶಂಕುಸ್ಥಾಪನೆ ನೆರವೇರಿದೆ. ಸಚಿವನಾಗಿದ್ದ 13 ತಿಂಗಳ ಅವಧಿಯಲ್ಲಿ ಈ ಐದಕ್ಕೂ ಮಂಜೂರಾತಿ ಕೊಡಿಸಿರುವೆ. ನಮ್ಮೆಲ್ಲ ಶಾಸಕರ ಸಂಕಲ್ಪ ಮತ್ತು ಸಂಘಟಿತ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ತರೀಕೆರೆ, ಕಡೂರು, ಚಿಕ್ಕಮಗಳೂರು ತಾಲೂಕಿನ 197 ಕೆರೆಗಳಿಗೆ ನೀರು ತುಂಬಿಸುವ 1,297 ಕೋಟಿ ರೂ. ವೆಚ್ಚದ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾಗಬೇಕಿದೆ. ಮುಂದಿನ ವರ್ಷದ ಆಯವ್ಯಯದಲ್ಲಿ ಇದಕ್ಕೆ ಮಂಜೂರಾತಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.

2 ವರ್ಷದಲ್ಲಿ ರೂ.60 ಸಾವಿರ ಕೋಟಿ ನಷ್ಟ: ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಕಳೆದ ವರ್ಷ 35 ಸಾವಿರ ಕೋಟಿ ಹಾಗೂ ಈ ವರ್ಷ 25 ಸಾವಿರ ಕೋಟಿ ರೂ. ನಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದರು.

ಕರೊನಾ ಕಾರಣದಿಂದಾಗಿ ರಾಜ್ಯ ಸರ್ಕಾರಕ್ಕೆ ಬರಬೇಕಾದ ಆದಾಯವೂ ಬರುತ್ತಿಲ್ಲ. ಇಂತಹ ಸಂಕಷ್ಟದ ನಡುವೆಯೂ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿ ಯೋಜನೆಗೆ ಅಗತ್ಯ ಅನುದಾನ ಒದಗಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಹಿಡಿದು ಎಲ್ಲರೂ ಮುಖ್ಯಮಂತ್ರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ವೈದ್ಯಕೀಯ ಸಚಿವ ಡಾ. ಸುಧಾಕರ್ ಮಾತನಾಡಿ, ಮುಖ್ಯಮಂತ್ರಿಗಳ ಸೂಚನೆಯಂತೆ ಮುಂಬರುವ ಆಯವ್ಯಯದಲ್ಲಿ ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸಾ ಕೇಂದ್ರಗಳು ಸುಸಜ್ಜಿತಗೊಳ್ಳಲಿದ್ದು, 2387 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೇಲ್ದರ್ಜೆಗೇರಲಿವೆ. ವಾರದ ಏಳು ದಿನ 24 ಗಂಟೆ ಕಾಲ ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ ನೀಡುವುದು ನಮ್ಮ ಬದ್ಧತೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net