ಬೆಂಗಳೂರಿಗೆ ನೀರು ಮಂಡ್ಯಕ್ಕೆ ಕಣ್ಣೀರು: ರೈತ ಹಿತರಕ್ಷಣಾ ಸಮಿತಿ ಆತಂಕ

Farmers Welfare Committee press conference Mandya
Published on

ಮಂಡ್ಯ: ತೀವ್ರ ವಿರೋಧದ ನಡುವೆಯೂ ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ ಹಾಗೂ 6ನೇ ಹಂತದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೆ ರಾಜ್ಯಸರ್ಕಾರ ಉತ್ಸುಕತೆ ತೋರುತ್ತಿದೆ. ಒಂದು ವೇಳೆ ಈ ಎಲ್ಲ ಯೋಜನೆಗಳು ಅನುಷ್ಠಾನವಾದರೆ ಡ್ಯಾಂಗೆ ಅಪಾಯ ಕಟ್ಟಿಟ್ಟ ಬುತ್ತಿ. ಮಾತ್ರವಲ್ಲದೆ ಬೆಂಗಳೂರಿಗೆ ನೀರು ಮಂಡ್ಯದ ರೈತರು ಕಣ್ಣೀರು ಹಾಕಬೇಕಾದ ಪರಿಸ್ಥಿತಿ ಎದುರಾಗಲಿದೆ ಎನ್ನುವ ಆತಂಕವನ್ನು ವಿವಿಧ ಸಂಘಟನೆಗಳು ವ್ಯಕ್ತಪಡಿಸುತ್ತಿವೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಜಿಲ್ಲೆಯ ರೈತರ ಬದುಕು ಹಸನಾಗಿಸಲು ನಿರ್ಮಾಣವಾದ ಕೃಷ್ಣರಾಜಸಾಗರ ಅಣೆಕಟ್ಟೆಯ ನೀರನ್ನು ಬೆಂಗಳೂರಿಗೆ ಹಂತ ಹಂತವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಇದರಿಂದ ರೈತರ ಬದುಕನ್ನು ದುಸ್ತರಕ್ಕೆ ದೂಡುವಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೆಆರ್‌ಎಸ್ ಅಣೆಕಟ್ಟಿನ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್, ಕಾವೇರಿ ಆರತಿ ಯೋಜನೆ, 6ನೇ ಹಂತದಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ಯೋಜನೆ ಅಣೆಕಟ್ಟಿಗೆ ಅಪಾಯ ತರುವಂತದ್ದಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಮಧ್ಯೆ ಪ್ರವೇಶಿಸಿ ಈ ಯೋಜನೆಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ 2,663 ಕೋಟಿ ರೂ, ಕಾವೇರಿ ಆರತಿಗೆ 100 ಕೋಟಿ ರೂ, ಬೆಂಗಳೂರಿಗೆ ನೀರು ಕೊಂಡೊಯ್ಯಲು 7,500 ಕೋಟಿ ರೂ ವ್ಯಯಿಸುತ್ತಿದೆ. ಈ ಎಲ್ಲ ಯೋಜನೆಗಳು ಅಣೆಕಟ್ಟಿನ ಭದ್ರತೆಗೆ ಧಕ್ಕೆಯುಂಟು ಂಆಡಲಿದೆ. ಆದ್ದರಿಂದ ಯೋಜನೆಗಳನ್ನು ಕೂಡಲೇ ಕೈ ಬಿಡುವುದಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.

ಅಣೆಕಟ್ಟಿನ ವ್ಯಾಪ್ತಿಗೆ ಶ್ರೀರಂಗಪಟ್ಟಣದ 3 ಹಾಗೂ ಪಾಂಡವಪುರದ 3 ಸೇರಿ ಒಟ್ಟು 6 ಗ್ರಾಪಂ ಸೇರಲಿವೆ. ಈ ಯೋಜನೆಗಳ ವಿರುದ್ಧವಾಗಿ 4 ಗ್ರಾಪಂ ಹಕ್ಕು ಮಂಡಿಸಿವೆ. ಒಂದು ಗ್ರಾಪಂ ತನ್ನ ನಿಲುವು ತಿಳಿಸಿಲ್ಲ. ಮತ್ತೊಂದು ಗ್ರಾಪಂ ಡೋಲಾಯಮಾನ ಸ್ಥಿತಿಯಲ್ಲಿದೆ. ಇನ್ನು ಯೋಜನೆ ಸಂಬಂಧ ವಿಪಕ್ಷ, ಜಿಲ್ಲೆಯ ಸಂಸದರು, ಸ್ಥಳೀಯ ಶಾಸಕರು ಚಕಾರವೆತ್ತುತ್ತಿಲ್ಲ. ಅವರಿಗೆ ಎಚ್ಚರಿಕೆ ಗಂಟೆ ನೀಡುತ್ತಿದ್ದೇವೆ. ಯಾರೂ ಯೋಜನೆಗಳ ಹೆಸರಿನಲ್ಲಿ ಅಣೆಕಟ್ಟೆಯ ಬಳಿಯೂ ಸುಳಿಯಬಾರದು. ಮುಖ್ಯವಾಗಿ ಈ ಸಂಬಂಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದನಿ ಎತ್ತಬೇಕು ಎಂದು ಆಗ್ರಹಿಸಿದರು.

ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಕನ್ನಡ ಸೇನೆ ಮಂಜುನಾಥ್, ಎಸ್.ನಾರಾಯಣ್, ಕೃಷ್ಣ, ಗ್ರಾಪಂ ಉಪಾಧ್ಯಕ್ಷ ಪಾಪಣ್ಣ, ರವಿಶಂಕರ್, ನರಸಿಂಹ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net