ಆನೆ ಬಿಡಾರಕ್ಕೆ ರೈತ ಹಿತರಕ್ಷಣಾ ಸಮಿತಿ ವಿರೋಧ

26bhr 1
Published on

ಬಾಳೆಹೊನ್ನೂರು: ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ಹಲಸೂರು ಸಾಮಾಜಿಕ ಅರಣ್ಯದ ತನೂಡಿಯಲ್ಲಿ ಮಾಡಲು ಉದ್ದೇಶಿಸಿರುವ ಆನೆ ಬಿಡಾರಕ್ಕೆ ಶೃಂಗೇರಿ ಕ್ಷೇತ್ರದ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ಸಮಿತಿ ಕ್ಷೇತ್ರ ಅಧ್ಯಕ್ಷ ಎಂ.ಎನ್.ನಾಗೇಶ್ ಹೇಳಿದರು.

ಶಿಬಿರದ ವಿಚಾರದಲ್ಲಿ ಅರಣ್ಯ ಸಚಿವರ ಹೇಳಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಹೇಳಿಕೆಗಳ ನಡುವೆ ವ್ಯತ್ಯಾಸವಿದೆ. ಈ ಬಗ್ಗೆ ಸ್ಥಳೀಯ ಗ್ರಾಪಂ ಹಾಗೂ ಗ್ರಾಮಸ್ಥರ ಜತೆ ಚರ್ಚಿಸದೆ ಆನೆ ಶಿಬಿರ ಮಾಡಲು ಉದ್ದೇಶಿರುವುದು ಸರಿಯಲ್ಲ. ಈಗಾಗಲೇ ಮಲೆನಾಡು ಒತ್ತುವರಿ ತೆರವು, ಸೆಕ್ಷನ್ 4, ಸೆಕ್ಷನ್ 17, ಕಸ್ತೂರಿ ರಂಗನ್ ವರದಿ ಯೋಜನೆಗಳಿಂದ ಇಲ್ಲಿನ ನಿವಾಸಿಗಳು ಹೈರಾಣಾಗಿದ್ದಾರೆ. ಜನ ಪ್ರತಿನಿಧಿಗಳು ವೇದಿಕೆ ಭಾಷಣಕ್ಕೆ ಸೀಮಿತರಾಗಿದಾರೆ. ಜನ ಹಿತ ಕಾಪಾಡಬೇಕಾದ ಅಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಇದರ ನಡುವೆ ಆನೆ ಶಿಬಿರ ಮಾಡಲು ಮುಂದಾಗಿರುವುದು ಮಲೆನಾಡಿಗರ ಮೇಲೆ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಸ್ಥಳೀಯರೊಂದಿಗೆ ಚರ್ಚಿಸಿ ವೈಜ್ಞಾನಿಕವಾಗಿ ರೂಪುರೇಷೆ ನಿರ್ಮಿಸಿ ಪ್ರವಾಸೋದ್ಯಮ ನೀತಿ ಜಾರಿ ಮಾಡುವುದಕ್ಕೆ ಸಮಿತಿಯ ವಿರೋಧವಿಲ್ಲ .ಆನೆ ವಿಹಾರ ಧಾಮ ಮಾಡುವುದನ್ನು ಸಮಿತಿ ವಿರೋಧಿಸುತ್ತದೆ. ಸ್ಥಳೀಯವಾಗಿ ಚರ್ಚಿಸದೆ ವ್ಯಾಪ್ತಿ ಕುರಿತು ಲಿಖಿತ ಭರವಸೆ ನೀಡದೆ ಯೋಜನೆ ಜಾರಿಯಾದರೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net