

ಪರಶುರಾಮಪುರ: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೈಕೊಟ್ಟ ಪರಿಣಾಮ ಶೇಂಗಾ ಬೆಳೆ ಒಣಗುತ್ತಿದ್ದು, ಕೊನೇ ಪಕ್ಷ ಜಾನುವಾರುಗಳಿಗೆ ಮೇವು ಆಗಲಿದೆ ಎಂಬ ಕಾರಣಕ್ಕೆ ಗಿಡಗಳನ್ನು ಅರಗುವ ಕಾರ್ಯಕ್ಕೆ ರೈತರು ಮುಂದಾಗಿದ್ದಾರೆ.
ಜೂನ್ ಮೊದಲ ವಾರದಲ್ಲಿ ಶೇಂಗಾ, ತೊಗರಿ, ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಹೋಬಳಿಯಾದ್ಯಂತ ರೈತರು 20,600 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಿದ್ದರು.
ಈಗ ಮಳೆ ಇಲ್ಲದೆ ಒಣಗುತ್ತಿರುವ ಗಿಡಗಳನ್ನು ನೇಗಿಲು, ಟ್ರಾೃಕ್ಟರ್‌ಗಳ ಮೂಲಕ ಅರಗುವ ಕಾರ್ಯ ಕೈಗೊಳ್ಳುವ ಮೂಲಕ, ಮೇವು ಸಂಗ್ರಹ ಕೆಲಸ ಭರದಿಂದ ನಡೆಯುತ್ತಿದೆ.
ಸರ್ಕಾರಕ್ಕೆ ವರದಿ: ಪ್ರತಿ ಎಕರೆಗೆ 30ರಿಂದ 40 ಸಾವಿರ ರೂ. ಖರ್ಚು ಮಾಡಿರುವ ರೈತರು, ಬೆಳೆ ಕೈಗೆ ಸಿಗುವುದಿಲ್ಲ ಎಂಬ ಖಚಿತವಾಗುತ್ತಿದ್ದಂತೆ ಜಾನುವಾರುಗಳಿಗೆ ಮೇವು ಆಗಲಿದೆ ಎಂಬ ಕಾರಣಕ್ಕೆ ಶೇಂಗಾ ಗಿಡಗಳನ್ನು ಕೀಳುವ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.- ಜೀವನ್, ಅಧಿಕಾರಿ, ರೈತಸಂಪರ್ಕ ಕೇಂದ್ರ