ಅಡಕೆ ಬೆಳೆಗಾರ ಚಿಂತಾಕ್ರಾಂತ

nut
ತೋಟದಲ್ಲಿ ಉದುರಿದ ಅಡಕೆಗಳು.
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹವಾಮಾನ ವೈಪರೀತ್ಯದಿಂದಾಗಿ ಹೆಬ್ರಿ ತಾಲೂಕಿನಲ್ಲಿರುವ ಬಹುತೇಕ ಅಡಕೆ ತೋಟಗಳಲ್ಲಿ ಅಡಕೆ ಉದುರುತ್ತಿದ್ದು, ಬೆಳೆಗಾರರು ಕಂಗೆಟ್ಟಿದ್ದಾರೆ.

ಜೂನ್‌ನಲ್ಲಿ ಆರಂಭವಾಗಬೇಕಿದ್ದ ಮಳೆ ತಡವಾಗಿ ಜುಲೈಯಿಂದ ಸುರಿದಿದೆ. ಹೀಗಾಗಿ ಒಂದು ತಿಂಗಳು ಹೆಚ್ಚಿನ ಬಿಸಿಲು ಇದ್ದುದರಿಂದ ಅಡಕೆ ಉದುರುತ್ತಿದೆ. ತಾಲೂಕಿನ ಸೀತಾ ನದಿ, ಕುಚ್ಚೂರು, ನಾಡ್ಪಾಲ್, ಕಬ್ಬಿನಾಲೆ, ವರಂಗ, ಶಿವಪುರದ ರೈತರು ಚಿಂತಾಕ್ರಾಂತರಾಗಿದ್ದಾರೆ.

ತೇವಾಂಶದಲ್ಲಿ ವ್ಯತ್ಯಾಸ

ಬೇಸಿಗೆ ಕಾಲದ ಅವಧಿ ಹೆಚ್ಚಾಗಿ ಅತಿಯಾದ ತಾಪ ಉಂಟಾಗಿದ್ದು, ಬಳಿಕ ಮಳೆ ಆರಂಭವಾಗಿದೆ. ಅಲ್ಲದೆ, ವಿಪರೀತವಾಗಿ ಮಳೆ ಸುರಿಯುತ್ತಿದ್ದು, ಹವಾಮಾನದ ತೇವಾಂಶದಲ್ಲಿ ವ್ಯತ್ಯಾಸ ಉಂಟಾಗಿದೆ. ಅಡಕೆ ಮರಗಳಿಗೆ ಬೋರಾನ್ ಹಾಗೂ ಪೊಟ್ಯಾಷ್ ಪೋಷಕಾಂಶದ ಕೊರತೆ ಉಂಟಾಗಿದ್ದು, ಇದೇ ಅಡಕೆ ಉದುರಲು ಕಾರಣ ಎನ್ನಲಾಗಿದೆ. ಈಗಲೇ ಮುಂಜಾಗ್ರತಾ ಕ್ರಮ ಅನುಸರಿಸಿ, ಕಾಲಕಾಲಕ್ಕೆ ಅವೆರಡು ಪೋಷಕಾಂಶಗಳನ್ನು ಮರಕ್ಕೆ ಹಾಕಬೇಕು. ಸೂಕ್ತ ಬಸಿ ಕಾಲುವೆ ನಿರ್ಮಾಣ ಮಾಡಬೇಕು ಎಂದು ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಬಸಿ ಕಾಲುವೆ

ತೋಟದಲ್ಲಿ ಎರಡು ಸಾಲುಗಳ ನಡುವೆ ಕನಿಷ್ಠ 1.5 ಅಡಿ ಗಾತ್ರದ ಬಸಿ ಕಾಲುವೆ ಮಾಡಲೇಬೇಕು. ಬಹುತೇಕರ ತೋಟಗಳಲ್ಲಿ ಈ ನಿಯಮ ಪಾಲಿಸುತ್ತಿಲ್ಲ. ಬಸಿ ಕಾಲುವೆ ನಿರ್ಮಾಣದಿಂದ ಬೇರುಗಳಿಗೆ ಉಸಿರಾಡಲು ಸಹಾಯಕವಾಗುತ್ತದೆ. ಹೆಚ್ಚು ನೀರು ಹರಿದು ಹೋದಂತೆ ರೋಗಗಳು ಇನ್ನಷ್ಟು ವ್ಯಾಪಿಸುವುದು ಹಾಗೂ ಕೀಟ ಬಾಧೆ ಕಡಿಮೆಯಾಗುತ್ತದೆ. ಹೀಗಾಗಿ ಬಸಿ ಕಾಲುವೆ ಪ್ರಯೋಜನಕಾರಿಯಾಗಿದೆ.

ಕಾರ್ಮಿಕರ ಸಮಸ್ಯೆ

ಅಡಕೆ ಬೆಳೆಯುವ ರೈತರಿಗೆ ಕೂಲಿ ಕಾರ್ಮಿಕರು ಸಿಗದಿರುವುದೇ ದೊಡ್ಡ ಸಮಸ್ಯೆಯಾಗಿದೆ. ಇತ್ತೀಚೆಗೆ ಹೆಚ್ಚಿನ ಸಂಬಳ ನೀಡುತ್ತೇವೆ ಎಂದರೂ ಕೆಲಸಕ್ಕೆ ಬರುತ್ತಿಲ್ಲ. ಅಡಕೆ ಮರಕ್ಕೆ ಮದ್ದು ಹೊಡೆಯಲೂ ದುಪ್ಪಟ್ಟು ದರ ನೀಡುತ್ತಿದ್ದಾರೆ. ಆದರೂ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದೀಗ ಅಡಕೆ ಉದುರುತ್ತಿದ್ದು ಮದ್ದು ಹೊಡೆದಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದಲೂ ರೈತ ಸಮಸ್ಯೆ ಎದುರಿಸುತ್ತಿದ್ದಾನೆ.

ಮತ್ತೆ ಕಾಡಲಿದೆಯೇ ಎಲೆಚುಕ್ಕಿ ರೋಗ?

ಈಗಾಗಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲೆ ಚುಕ್ಕಿ ರೋಗದ ತೀವ್ರತೆ ಹೆಚ್ಚಾಗಿದೆ. ಈ ಭಾಗಕ್ಕೂ ವ್ಯಾಪಿಸುವ ಸಾಧ್ಯತೆ ಇದೆ. ಅಡಕೆಗೆ ಹೊಡೆಯುವ ಮದ್ದನ್ನು ಬೆಳೆಗಾರರು ಎಲೆಗಳಿಗೂ ಹೊಡೆಯುವುದು ಸೂಕ್ತ. ಬೇಸಿಗೆ ಸಮೀಪಿಸುತ್ತಿದ್ದಂತೆ ಲೆಚುಕ್ಕಿ ರೋಗ ತೀವ್ರಗೊಂಡಲ್ಲಿ ಅಂತರ್ವ್ಯಾಪಿ ಶಿಲೀಂದ್ರ ನಾಶಕ ಬಳಸಬೇಕು. ಹೆಬ್ರಿ ಭಾಗದಲ್ಲಿ ವಿಪರೀತವಾಗಿ ಮಳೆಯಾಗುತ್ತಿರುವುದರಿಂದ ಕೊಳೆರೋಗವೂ ಅಡಕೆ ಮರವನ್ನು ಕಾಡಬಹುದಾಗಿದೆ. ಹೀಗಾಗಿ ಬೆಳೆಗಾರರು ಮುಂಜಾಗ್ರತಾ ಕ್ರಮ ಅನುಸರಿಸುವುದು ಉತ್ತಮ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು.

ಅಡಕೆ ಉದುರುತ್ತಿರುವುದಕ್ಕೆ ಹವಾಮಾನ ವೈಪರೀತ್ಯ ಹಾಗೂ ತೇವಾಂಶದಲ್ಲಿ ಉಂಟಾದ ವ್ಯತ್ಯಾಸವೇ ಕಾರಣವಾಗಿದೆ. ನಾನು ಗಮನಿಸಿದಂತೆ ಬಹುತೇಕ ರೈತರು ಬಸಿ ಕಾಲುವೆ ನಿರ್ಮಿಸಿಲ್ಲ. ಮಳೆ ತಡವಾಗಿ, ಬಿಸಿಲು ಹೆಚ್ಚಾಗಿ, ಮತ್ತೆ ನಿರಂತರ ಮಳೆ ಸುರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ. ಸೂಕ್ತ ಮುಂಜಾಗ್ರತೆ ವಹಿಸಿದರೆ ಸಮಸ್ಯೆ ಆಗದು. -ಶ್ರೀನಿವಾಸ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಕಾರ್ಕಳ ತಾಲೂಕು

ನಮ್ಮ ತೋಟದಲ್ಲಿ ವಿಪರೀತ ಪ್ರಮಾಣದಲ್ಲಿ ಅಡಕೆ ಬೀಳುತ್ತಿದೆ. ತೋಟಗಾರಿಕೆ ಇಲಾಖೆ ಸಂಪರ್ಕಿಸಿದರೆ ಹವಾಮಾನ ವೈಪರೀತ್ಯ ಕಾರಣ ಎನ್ನುತ್ತಾರೆ. ಈಗಾಗಲೇ ಮದ್ದು ಸಿಂಪಡಿಸಿದ್ದರೂ ಕಡಿಮೆಯಾಗಿಲ್ಲ. ಈ ವರ್ಷ ವ್ಯಾಪಕವಾಗಿ ಕೊಳೆ ರೋಗವೂ ಕಾಡಬಹುದು. ಬೆಳೆ ಹಾನಿಯಾದರೆ ಇಲಾಖೆ ಸೂಕ್ತ ಪರಿಹಾರ ನೀಡಬೇಕು. -ನವೀನ ಕೆ. ಅಡ್ಯಂತಾಯಅಡಕೆ ಬೆಳೆಗಾರ, ಹೆಬ್ರಿ https://www.vijayavani.net/kubja-river-footbridge-problem https://www.vijayavani.net/washroom-video-bjp-protest

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net