ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ರೈತ ಸಂಘ ಬೆಂಬಲ

HUN-FEB-15-2(VAO STRIKE SUPPORTED BY RAITHA SANGHA)
ಹುಣಸೂರು ನಗರದ ತಾಲೂಕು ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರೈತಸಂಘ ಬೆಂಬಲ ವ್ಯಕ್ತಪಡಿಸಿತು. ಹೊಸೂರು ಕುಮಾರ್, ಕಿರಿಜಾಜಿ ಧನಂಜಯ್, ವಿಜಿ, ತೀರ್ಥಕುಮಾರ್ ಶ್ರೀಹರ್ಷ ಇತರರಿದ್ದರು.
Published on

ಹುಣಸೂರು: ಗ್ರಾಮ ಆಡಳಿತ ಅಧಿಕಾರಿಗಳು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರೈತಸಂಘ ಬೆಂಬಲ ವ್ಯಕ್ತಪಡಿಸಿತು.

ಆರನೇ ದಿನಕ್ಕೆ ಕಾಲಿಟ್ಟಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮತ್ತವರ ತಂಡ ಶನಿವಾರ ಮುಷ್ಕರ ನಿರತರೊಂದಿಗೆ ಕುಳಿತು ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು ವೇತನ ಹೆಚ್ಚಿಸಲು ಕೋರಿ ಮುಷ್ಕರ ನಡೆಸುತ್ತಿಲ್ಲ. ಬದಲಾಗಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತಹ ಮೂಲಸೌಕರ್ಯಗಳನ್ನು ಒದಗಿಸಲು ಒತ್ತಾಯಿಸುತ್ತಿದ್ದಾರೆ. ಇದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಮೊಬೈಲ್, ಪ್ರಿಂಟರ್, ಸ್ಕ್ಯಾನರ್ ಇಲ್ಲದೇ, ಸುಸಜ್ಜಿತ ಕಚೇರಿಯಿಲ್ಲದೆ ಅವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದಾದರೂ ಹೇಗೆ? ಅವರ ಮುಷ್ಕರದಿಂದಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೈತರಿಗೆ, ನಾಗರಿಕರಿಗೆ ಮತ್ತು ಮುಖ್ಯವಾಗಿ ಈಗಿನ ಪರಿಸ್ಥಿತಿಯಲ್ಲಿ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮತ್ತು ಶೈಕ್ಷಣಿಕ ಪರೀಕ್ಷೆಗಳನ್ನು ಎದುರಿಸಬೇಕಾಗಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗಿದೆ. ಸರ್ಕಾರ ಇಂತಹ ಸೂಕ್ಷ್ಮತೆಗಳನ್ನು ಗಮನಿಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಫೆ.17ರೊಳಗೆ ರಾಜ್ಯಾದ್ಯಂತ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ರೈತಸಂಘ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದ ಅಧ್ಯಕ್ಷ ತೀರ್ಥಕುಮಾರ್, ಉಪಾಧ್ಯಕ್ಷೆ ಜ್ಯೋತಿ, ಶ್ರೀವರ್ಷ , ರೈತ ಸಂಘದ ಕಿರಿಜಾಜಿ ಧನಂಜಯ, ಮೂಕನಹಳ್ಳಿ ವಿಜಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net