

ಉಡುಪಿ: ಬ್ರಹ್ಮಾವರದ ದ.ಕ. ಜಿಲ್ಲಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ 2021-22ನೇ ಸಾಲಿನಲ್ಲಿ ಗುಜರಿ ಮಾರಾಟ ಪ್ರಕ್ರಿಯೆಯಲ್ಲಿ ನಿಯಮ ಬಾಹಿರವಾಗಿ 14 ಕೋಟಿ ರೂ. ಹೆಚ್ಚಿನ ಅವ್ಯವಹಾರದ ಆರೋಪದ ಬಗ್ಗೆ ವಿಳಂಬ ತನಿಖೆ ಖಂಡಿಸಿ ಫೆ.22 ರಂದು ಬೆಳಗ್ಗೆ 9.30 ರಿಂದ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಗೇಟಿನ ಬಳಿಯಲ್ಲಿ ಅರ್ನಿದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ಉಡುಪಿ ಜಿಲ್ಲಾ ರೈತ ಸಂಘ ನಿರ್ಧರಿಸಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಣಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಖಾನೆ ಆಡಳಿತ ಮಂಡಳಿ, ಸಿಬ್ಬಂದಿ, ಗುತ್ತಿಗೆದಾರರು ಈ ಹರಣದಲ್ಲಿ ಶಾಮೀಲಾಗಿದ್ದು, ನ್ಯಾಯಾಲಯದ ಆದೇಶದಂತೆ ಬ್ರಹ್ಮಾವರ ಠಾಣೆಯಲ್ಲಿ 2023 ರ ಅ.25 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಅಧಿಕಾರಿಗಳು ಆರೋಪಿಗಳಾಗಿರುವುದರಿಂದ ತನಿಖೆ ನಡೆಸಲು ಸರ್ಕಾರದ ಪೂರ್ವಾನುಮತಿಯನ್ನು ಪಡೆಯಲು 2024 ಆ.14 ರಂದು ಪೋಲಿಸ್ ಇಲಾಖೆ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯನ್ನು ಕೋರಿದ್ದರೂ ಈ ತನಕ ಅಲ್ಲಿಂದ ಪೂರ್ವಾನುಮತಿ ದೊರೆತಿಲ್ಲ. ತನಿಖೆ ಬಗ್ಗೆ ಸರ್ಕಾರ ಮೃದುಧೋರಣೆ ಅನುಸರಿಸುತ್ತಿದೆ. ಪ್ರತಿ ಹಂತದಲ್ಲೂ ತನಿಖೆಗೆ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿರುವವರ ವಿರುದ್ದ ಕಾನೂನು ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದೇವೆ ಎಂದರು.
ಧರಣಿ ಸತ್ಯಾಗ್ರಹದಲ್ಲಿ ಪ್ರತಿದಿನ ಕನಿಷ್ಠ 25 ಜನರಂತೆ, ಮೂರು ತಿಂಗಳು ಅಹೋರಾತ್ರಿ ಧರಣಿ ನಡೆಸಲು ಸಿದ್ಧ್ದತೆಯನ್ನು ಮಾಡಿಕೊಳ್ಳಲಾಗಿದೆ. ದ.ಕ ಜಿಲ್ಲಾ ಸಕ್ಕರೆ ಕಾರ್ಖಾನೆಯ ಸದಸ್ಯರು, ವಿವಿಧ ರೈತಪರ ಸಂಘಟನೆಗಳು, ಸಹಕಾರಿ ಕ್ಷೇತ್ರದ ಸಹಕಾರಿ ಪ್ರಮುಖರು, ಪಂಚಾಯತ್ ರಾಜ್ ಒಕ್ಕೂಟದ ಪ್ರತಿನಿಧಿಗಳು, ಪ್ರಾಂತೀಯ ರೈತ ಸಂಘವು ಬೆಂಬಲಿಸಿ, ಅಹೋರಾತ್ರಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕಂಬದಕೋಣೆ ಸಹಕಾರಿ ಪತ್ತಿನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ರೈತ ಮುಖಂಡರಾದ ಸದಾನಂದ ಶೆಟ್ಟಿ, ಅಶೋಕ್ ಕುಮಾರ್ ಶೆಟ್ಟಿ, ಭೋಜ ಕುಲಾಲ್ ಉಪಸ್ಥಿತರಿದ್ದರು.