ಕಲ್ಲುಮೊಟ್ಟೆಯಲ್ಲಿ ರೈತ ಸಂಘ ಪ್ರತಿಭಟನೆ

24 gkp .2
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಕಲ್ಲುಮೊಟ್ಟೆಯಲ್ಲಿ ಹೊಟ್ಟೆಂಗಡ ರತೀಶ್ ಅವರು ಮೇಯಲು ಕಟ್ಟಿದ್ದ ಹಸುವಿನ ಮೇಲೆ ಶುಕ್ರವಾರ ಹುಲಿ ದಾಳಿ ಮಾಡಿ ಕೊಂದು ಹಾಕಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಳೀಯ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.
Published on

ಗೋಣಿಕೊಪ್ಪ: ಹೈಸೊಡ್ಲೂರು ಗ್ರಾಮದ ಕಲ್ಲುಮೊಟ್ಟೆಯಲ್ಲಿ ಹಸುವನ್ನು ಹುಲಿ ಕೊಂದು ಹಾಕಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸ್ಥಳೀಯ ಮುಖಂಡರು ಶನಿವಾರ ಪ್ರತಿಭಟನೆ ನಡೆಸಿದರು.

ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಕಲ್ಲುಮೊಟ್ಟೆಯಲ್ಲಿ ಹೊಟ್ಟೆಂಗಡ ರತೀಶ್ ಅವರು ಮೇಯಲು ಕಟ್ಟಿದ್ದ ಹಸುವಿನ ಮೇಲೆ ಶುಕ್ರವಾರ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ರೈತ ಸಂಘದ ಮುಖಂಡರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಹಸುವಿನ ಮಾಲೀಕರಿಗೆ ಕೂಡಲೇ ಸರ್ಕಾರದಿಂದ ಅಗತ್ಯ ಪರಿಹಾರ ಕೊಡಿಸುವಂತೆ ಹಾಗೂ ಹುಲಿಯ ಚಲನವಲನಗಳನ್ನು ಕಂಡು ಹಿಡಿಯಲು ಸಿಸಿ ಟಿವಿ ಕ್ಯಾಮರಾ ಅಳವಡಿಕೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಪಟ್ಟು ಹಿಡಿದರು. ಅಲ್ಲದೆ ಇನ್ನು 5 ದಿನಗಳಲ್ಲಿ ಕಾರ್ಯಾಚರಣೆ ನಡೆಸಿ ಹುಲಿಯನ್ನು ಸೆರೆ ಹಿಡಿಯಬೇಕು. ತಪ್ಪಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಈ ಸಂದರ್ಭ ಸಂಕೇತ್ ಪೂವಯ್ಯ ರೈತರ ಮನವೊಲಿಸಿ, ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.

ರಾಜ್ಯ ವನ್ಯಜೀವಿ ಸಂರಕ್ಷಣಾ ಸಮಿತಿ ಸದಸ್ಯ ಸಂಕೇತ್ ಪೂವಯ್ಯ ಮಾತನಾಡಿ, ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಕ್ಯಾಮರಾ ಅಳವಡಿಸಿ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಎರಡು ಹುಲಿಗಳನ್ನು ಸೆರೆ ಹಿಡಿದು ಪುನರ್ವಸತಿ ಕಲ್ಪಿಸಲು ಅನುಮತಿ ದೂರಕಿಸಿದ್ದು, ಅದರಂತೆ ಅರಣ್ಯ ಇಲಾಖೆ ವೈಜ್ಞಾನಿಕ ಕಾರ್ಯಾಚರಣೆ ನಡೆಸುತ್ತಿದ್ದು ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಶ್ರೀಮಂಗಲ ಹೋಬಳಿ ಘಟಕದ ಅಧ್ಯಕ್ಷ ಚಟ್ಟಂಗಡ ಕಂಬ ಕಾರ್ಯಪ್ಪ ಮಾತನಾಡಿ, ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರವಾಗಿ ಹುಲಿ ದಾಳಿ ನಡೆಸುತ್ತಿದ್ದು, ಅರಣ್ಯ ಇಲಾಖೆಯಿಂದ ಯಾವುದೇ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಅರಣ್ಯ ಇಲಾಖೆ ಕೇವಲ ಆಶ್ವಾಸನೆ ನೀಡುತ್ತಿದೆ ಹೊರತು ಯಾವುದೇ ಶಾಶ್ವತ ಪರಿಹಾರ ಕೈಗೊಂಡಿಲ್ಲ. ಮುಂದಿನ 10 ದಿನಗಳಲ್ಲಿ ಕಾರ್ಯಾಚರಣೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಎಸಿಎಫ್ ಗೋಪಾಲ್ ಮಾತನಾಡಿ, ಶುಕ್ರವಾರ ಬೆಳೂರು ಮತ್ತು ಹೈಸೊಡ್ಲೂರು ವ್ಯಾಪ್ತಿಯಲ್ಲಿ ಹುಲಿ ದಾಳಿ ಮಾಡಿ ಎರಡು ಹಸುಗಳನ್ನು ಕೊಂದು ಹಾಕಿದ್ದು, ಮಾಹಿತಿ ತಿಳಿದ ಮೇರೆಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಲಾಗಿದೆ. ಕ್ಯಾಮರಾ ಅಳವಡಿಸಿ ಹುಲಿಯ ಚಲನವಲನ ಪತ್ತೆ ಹಚ್ಚಿ ಸೆರೆ ಹಿಡಿಯುವ ಕಾರ್ಯಾಚರಣೆ ಮಾಡಲಾಗುವುದು ಎಂದರು.

ವಿರಾಜಪೇಟೆ ತಾಲೂಕು ರೈತ ಸಂಘದ ಅಧ್ಯಕ್ಷ ಬಾಚಿಮಾಡ ಭವಿ ಕುಮಾರ್, ಹುದಿಕೇರಿ ಹೋಬಳಿ ರೈತ ಸಂಘದ ಅಧ್ಯಕ್ಷ ಬಲ್ಯಮೀದೆರೀರ ಪ್ರಕಾಶ್, ಪೊನ್ನಂಪೇಟೆ ತಾಲೂಕು ಕಾಂಗ್ರೆಸ್ ವಲಯ ಅಧ್ಯಕ್ಷ ಮೀದೇರೀರ ನವೀನ್, ಪೊನ್ನಂಪೇಟೆ, ವಿರಾಜಪೇಟೆ, ತಿತಿಮತಿ, ಆರ್‌ಆರ್‌ಟಿ ಸಿಬ್ಬಂದಿ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net