ಗುಣಮಟ್ಟದ ವಿದ್ಯುತ್ ಪೂರೈಸುಂತೆ ಒತ್ತಾಯಿಸಿ ರೈತ ಸಂಘದಿಂದ ಪ್ರತಿಭಟನೆ

10adarshkdga3
Published on

ಮಡಿಕೇರಿ: ಕರ್ನಾಟಕ ವಿದ್ಯುತ್ ಚ್ಛಕ್ತಿ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ)ರವರಿಂದ ವಿದ್ಯುತ್ ಚ್ಛಕ್ತಿ ದರ ಏರಿಕೆ ಮತ್ತು ಜಿಲ್ಲಾಯಾದ್ಯಂತ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಸುಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೆಸ್ಕ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.


ನಗರದಲ್ಲಿ ಮೆರವಣಿಗೆ ಮೂಲಕ ಸಾಗಿದ ಪ್ರತಿಭಟನಾ ನಿರತರು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.


ಈ ಸಂದರ್ಭ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಜಿಲ್ಲೆಯ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ತಲೆದೋರಿವೆ. ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಏರಿಸಿ ಗಾಯದ ಮೇಲೆ ಬರೆ ಎಳೆದಿದೆ. ಇದರಿಂದ ಎಲ್ಲಾ ವರ್ಗದ ಜನರಿಗೆ ಸಂಕಷ್ಟ ಉಂಟಾಗಿದೆ. ರೈತಾಪಿ ವರ್ಗಕ್ಕೂ ದರ ಏರಿಕೆ ಸಮಸ್ಯೆಯಾಗಿದೆ. ಜನರ ಸಮಸ್ಯೆ ಮನಗಂಡು ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು.


ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ವಿದ್ಯುತ್ ದರ ಇಳಿಸಬೇಕು. ಕಾಫಿ ಬೆಳೆಗಾರರಿಗೆ ೧೦ ಎಚ್.ಪಿ.ವರಗಿನ ವಿದ್ಯುತ್ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ರಹಿತ ಉಚಿತ ವಿದ್ಯುತ್ ಸಬ್ಸಿಡಿ ಮೂಲಕ ರಾಜ್ಯ ರ್ಸಕಾರ ನೇರವಾಗಿ ಶುಲ್ಕ ಪಾವತಿಸಬೇಕು. ಜಿಲ್ಲೆಯಲ್ಲಿ ನಿತ್ಯ ಕನಿಷ್ಟ ೨೦ ಗಂಟೆಗಳ ಕಾಲ ೩ ಫೇಸ್‌ನಲ್ಲಿ ಕಡ್ಡಾಯವಾಗಿ ವಿದ್ಯುತ್ ಪೂರೈಸಬೇಕು. ಜಂಗಲ್ ಕಟ್ಟಿಂಗ್‌ಗೆ ಕ್ರಮವಹಿಸಬೇಕು. ಗ್ರಾಹಕರ ಗಮನಕ್ಕೆ ತಾರದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು. ಗ್ರಾಹಕರ ವಿಳಾಸ ಬದಲಾವಣೆಯನ್ನು ಕೇವಲ ೨೦೦ ರೂ. ಒಳಗೆ ಮಾಡಬೇಕು ಎಂದು ಒತ್ತಾಯಿಸಿದರು.


ವಿದ್ಯುತ್ ಅವಘಡ ಪರಿಹಾರವನ್ನು ೨ ತಿಂಗಳಿನೊಳಗೆ ನೀಡಬೇಕು. ಬಾಕಿ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಸರ್ಕಾರ ಮನ್ನಾ ಮಾಡಬೇಕು. ಶ್ರೀಮಂಗಲ, ಬಾಳೆಲೆ, ಮೂರ್ನಾಡು, ಸೋಮವಾರಪೇಟೆಯಲ್ಲಿ ೬೬/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ಕೆಲಸ ಶೀಘ್ರ ಪೂರ್ಣಗೊಳಿಸಬೇಕು. ಪೊನ್ನಂಪೇಟೆ ತಾಲೂಕಿನಲ್ಲಿ ಡಿವಿಷನ್ ಕಚೇರಿ ಸ್ಥಾಪಿಸಬೇಕು. ಆನೆ ಕಾರಿಡಾರ್‌ಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಕಾನೂನು ಸಲಹೆಗಾರ ಹೇಮಚಂದ್ರ ಮಾತನಾಡಿ, ತೋಟಗಳ ನಡುವೆ ವಾಸಿಸುವ ರೈತರ ವಿದ್ಯುತ್ ಬಳಕೆ ಹೆಚ್ಚಿರುವ ಹಿನ್ನೆಲೆ ರೈತರಿಗೆ ೫೦೦ ಯೂನಿಟ್ ಉಚಿತ ವಿದ್ಯುತ್ ನೀಡಬೇಕು. ವಿದ್ಯುತ್ ಮೀಟರ್ ವರ್ಗಾವಣೆಗೆ ರೂ.೮ ರಿಂದ ೧೦ ಸಾವಿರ ಪಾವತಿ ಮಾಡಬೇಕಾಗಿದೆ. ಇದು ಹೊರೆಯಾಗಿದ್ದು, ಉಚಿತ ಸೇವೆ ಒದಗಿಸುವಂತೆ ಆಗ್ರಹಿಸಿದರು.


ಸ್ಥಳಕ್ಕಾಗಮಿಸಿದ ಮೈಸೂರು ಕೆಪಿಟಿಸಿಎಲ್ ಸೆಕ್ಟರ್ ಹಾಗೂ ಮುಖ್ಯ ಅಭಿಯಂತರ ಸೋಮರಾಜು, ರೈತ ಸಂಘದ ಬೇಡಿಕೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ಕಾರ್ಯವ್ಯಾಪ್ತಿಯಲ್ಲಿ ಆಗುವ ಕೆಲಸಗಳನ್ನು ಮಾಡಲಾಗುವುದು. ರಾಜ್ಯ ಸರ್ಕಾರಕ್ಕೆ ರೈತ ಸಂಘದ ಬೇಡಿಕೆಗಳನ್ನು ತಿಳಿಸಲಾಗುವುದು. ಗುಣಮಟ್ಟದ ವಿದ್ಯುತ್ ನೀಡುವುದು ನಮ್ಮ ಆದ್ಯತೆಯಾಗಿದೆ ಎಂದರು.


ಚೆಸ್ಕಾಂ ಜಿಲ್ಲಾ ಕಾರ್ಯಪಾಲಕ ಅಭಿಯಂತರೆ ಅನಿತಾ ಬಾಯಿ ಸಮಸ್ಯೆ ಸರಿಪಡಿಸುವ ಭರವಸೆ ನೀಡಿದರು.


ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಖಜಾಂಜಿ ಸಬಿತಾ ಭೀಮಯ್ಯ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ದಿನೇಶ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಅಧ್ಯಕ್ಷ ಕಿಸ ಮಾಚಯ್ಯ, ಸಿದ್ದಾಪುರ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಯ್ಯ, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ಕಂಬ ಕರುಂಬಯ್ಯ, ಪ್ರಮುಖರಾದ ಚೆಪ್ಪುಡೀರ ಕಾರ್ಯಪ್ಪ, ಹೂವಯ್ಯ, ಸಜೀವ್, ರಾಯ್ ಮಾದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net