

ಮಂಡ್ಯ: ಭ್ರಷ್ಟಾಚಾರದಲ್ಲಿ ನಿರತರಾಗಿ ಅಧಿಕಾರ ದುರ್ಬಳಕೆ ಮಾಡುತ್ತಾ, ಕರ್ತವ್ಯಲೋಪ ಎಸಗಿರುವ ಜಿಲ್ಲಾ ಅಬಕಾರಿ ಉಪ ಆಯುಕ್ತರು ಮತ್ತು ಕಚೇರಿ ಗುಮಾಸ್ತನನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘ (ರೈತ ಬಣ) ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಮೆರವಣಿಗೆ ಹೊರಟು ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮಹಾದೇವಿ ಬಾಯಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ವಿಫಲರಾಗಿದ್ದು, ಕಚೇರಿ ಗುಮಾಸ್ತ ಸಂತೋಷ್ ತಾಳಕ್ಕೆ ತಕ್ಕಂತೆ ಕೆಲಸ ನಿರ್ವಹಿಸಿ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕಚೇರಿಯ ಪ್ರತಿಯೊಂದು ಕಡತಕ್ಕೂ ಸನ್ನದ್ದುದಾರರು ಗುಮಾಸ್ತನನ್ನು ಭೇಟಿ ಮಾಡಿ, ಅವನು ಕೇಳಿದಷ್ಟು ಹಣ ನೀಡಿದಲ್ಲಿ ಮಾತ್ರ ಕಡತಕ್ಕೆ ಸಹಿ ಬಿಳಲಿದೆ. ಅಬಕಾರಿ ಜಿಲ್ಲಾಧಿಕಾರಿ ಕೂಡ ಅವನ ತಾಳಕ್ಕೆ ಕುಣಿಯುತ್ತಾ ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದಾರೆ. ಉಪ ಆಯುಕ್ತರಾದ ಮಹಾದೇವಿ ಬಾಯಿ ಕೇಂದ್ರ ಸ್ಥಾನದಲ್ಲಿರದೆ ಸರ್ಕಾರಿ ವಾಹನವನ್ನು ದುರುಪಯೋಗಪಡಿಸಿಕೊಂಡು ಪ್ರತಿನಿತ್ಯ ಮೈಸೂರಿಗೆ ಹೋಗಿ ಬರುತ್ತಿದ್ದಾರೆ. ಅಬಕಾರಿ ಕೈಪಿಡಿ ಅನ್ವಯ ಯಾವ ತಾಲೂಕಿಗೂ ಭೇಟಿ ನೀಡದೆ ಹಾಗೂ ವಾಸ್ತವ್ಯ ಹೂಡದೇ ಸುಳ್ಳು ಅಂಕಿ ಅಂಶಗಳನ್ನು ಡೈರಿಯಲ್ಲಿ ತೋರಿಸುತ್ತಾ ಎಲ್ಲ ಸನ್ನದು ಪುಸ್ತಕಗಳನ್ನು ಕಚೇರಿಗೆ ತರಿಸಿ ಸಹಿ ಮಾಡಿ ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ವಾರದಲ್ಲಿ ಒಂದೆರೆಡು ಬಾರಿ ಬಂದು ಇನ್ನುಳಿದ ಅವಧಿಯಲ್ಲಿ ಮೈಸೂರಿನಲ್ಲಿಯೇ ವಾಸ್ತವ್ಯ ಹೂಡುತ್ತಾರೆ. ಜಿಲ್ಲೆಯಲ್ಲಿ ನಿಯಮಗಳನ್ನು ತೂರಿ ಹಣದ ಆಮಿಷಕ್ಕೊಳಗಾಗಿ ಹಲವಾರು ಸಿಎಲ್- 7 ಬಾರ್‌ಗಳಿಗೆ ಅನುಮತಿ ನೀಡಿದ್ದಾರೆ. ಸನ್ನದ್ದುದಾರರಿಗೆ 2023-24ನೇ ಸಾಲಿನ ನವೀಕರಣಗೊಂಡಿರುವ ಕಾರಣ ಸನ್ನದುದಾರರಿಗೆ ತಲಾ 1 ಲಕ್ಷ ನೀಡಬೇಕೆಂದು ಒತ್ತಾಯ ಹಾಕಿ ವಸೂಲಿ ಮಾಡುತ್ತಿದ್ದಾರೆ. ಅಬಕಾರಿ ಆಯುಕ್ತರ ಕಚೇರಿಗೆ ನೀಡಿರುವ ಸುಳ್ಳು ಡೈರಿಯನ್ನು ಪರಿಶೀಲಿಸಬೇಕು. ಇವರನ್ನು ವರ್ಗಾವಣೆ ಮಾಡಿ ಇಲಾಖಾ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಪ್ರತಿಯೊಂದು ಹಳ್ಳಿಯ ಚಿಲ್ಲರೆ ಅಂಗಡಿ ಮತ್ತು ಡಾಬಾಗಳಲ್ಲಿ ಮದ್ಯ, ಬಿಯರ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಮಹಿಳೆಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಳ್ಳಿಗಳಲ್ಲಿ ಮಾರಾಟವಾಗುತ್ತಿರುವ ಮದ್ಯ ಗುಣಮಟ್ಟದ್ದಲ್ಲ. ದ್ವಿತೀಯ ದರ್ಜೆಯ ಮದ್ಯವನ್ನು ಮಾರಾಟ ಮಾಡುತ್ತಿದ್ದರೂ ದಾಳಿ ಮಾಡದೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದರಿಂದಾಗಿ ಹಳ್ಳಿಗಳ ವಾತಾವರಣ ಹದಗೆಟ್ಟಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಇಂಗಲಕುಪ್ಪೆ ಕೃಷ್ಣೇಗೌಡ, ಹೆಮ್ಮಿಗೆ ಚಂದ್ರಶೇಖರ್, ರಾಜೇಶ್, ಮಂಜು ಪಾಳ್ಯ, ರಾಮಚಂದ್ರ ಪಾಳ್ಯ, ಸಚ್ಚಿದಾನಂದ ಇತರರಿದ್ದರು.