ವಿದ್ಯುತ್ ಖಾಸಗಿಕರಣ ವಿರೋಧಿಸಿ ರೈತ ಸಂಘ ಪ್ರತಿಭಟನೆ

raichur
raichur
Published on

 ರಾಯಚೂರು ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಗುರುವಾರ ನಗರದ ಬಸವೇಶ್ವರ ವೃತ್ತದಿಂದ ಜೆಸ್ಕಾಂ ಕಚೇರಿವರೆಗೆ ಪಾದಯಾತ್ರೆ ಮೂಲಕ ತೆರಳಿ ಜೆಸ್ಕಾಂ ಇಲಾಖೆಯ ಎಇಇ ಚಂದ್ರಶೇಖರ ದೇಸಾಯಿಗೆ ಮನವಿ ಸಲ್ಲಿಸಿದರು.

ರಾಜ್ಯ ಸರ್ಕಾರ, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಕಾರ್ಡ್, ಡಿಜಿಟಲ್ ಮೀಟರ್, ಅಳವಡಿಕೆಗೆ 10 ಸಾವಿರ ರೂ. ಮುಂಗಡ ಹಣ ಪಾವತಿಸಲು ಶುಲ್ಕ ನಿಗಧಿಪಡಿಸಿದ್ದು ಇದರಿಂದ ರೈತರಿಗೆ ತೊಂದರೆಯಾಗಲಿದೆ, 10 ಸಾವಿರ ಡಿಪಾಜಿಟ್ ಕಟ್ಟಲು ರೈತರಿಂದ ಸಾಧ್ಯವಿಲ್ಲ, ಸರ್ಕಾರದ ತೆಗೆದುಕೊಂಡಿರುವ ನಿರ್ಧಾರ ಹಿಂಪಡೆಯಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಹುನ್ನಾರ ನಡೆಸಿದ್ದು, ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ವಿದ್ಯುತ್ ಪರಿಕರಗಳನ್ನು ಅಕ್ರಮ ಸಕ್ರಮ ಅಡಿಯಲ್ಲಿ ಈ ಹಿಂದೆ ನೀಡಿದಂತೆಯೇ ರೈತರಿಗೆ ಉಚಿತ ವಿದ್ಯುತ್ತನ್ನು ನೀಡಬೇಕು, ವಿದ್ಯುತ್ ಸಂಪರ್ಕಕ್ಕೆ ರೈತರ ಆಧಾರ ಜೋಡಣೆ ಮಾಡುವುದನ್ನು ನಿಲ್ಲಿಸಬೇಕು, ರೈತರ ಜಮೀನಿನಲ್ಲಿ 3 ರಿಂದ 4 ಬೋರ್‌ವೆಲ್‌ಗಳಿದ್ದು ಅಂತರ್ ಜಲ ಕಡಿಮೆಯಾಗಿದೆ, ಇಂತಹ ಸಂದರ್ಭಗಳಲ್ಲಿಯೂ ಸಹ ಸರ್ಕಾರ ಆಧಾರ ಜೋಡಣೆ ಮಾಡುತ್ತಿರುವುದು ರೈತರನ್ನು ಸಂಕಷ್ಟಕ್ಕೀಡಾಗುವಂತೆ ಮಾಡುವ ಆಧಾರ ಜೋಡಣೆ ಕೈಬಿಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ವಿವಿಧ ಯೋಜನೆಯಡಿ ಟಿಸಿಗಳನ್ನು ಮಾತ್ರ ನೀಡುತ್ತಿದ್ದು, ವಿದ್ಯುತ್ ಕಂಬ ಮತ್ತು ವೈರ್‌ಗಳನ್ನು ರೈತರು ತಮ್ಮ ಸ್ವಂತ ಖರ್ಚಿನಿಂದ ಭರಿಸಲು ಸಾಧ್ಯವಿಲ್ಲ, ಸರ್ಕಾರವೇ ಉಚಿತವಾಗಿ ನೀಡಬೇಕು. ಜಮೀನಿನಲ್ಲಿ ಮನೆ ನಿರ್ಮಿಸಿ ಕೊಂಡು ವಾಸವಾಗಿರುವ ರೈತರಿಗೆ, ವಿದ್ಯಾರ್ಥಿಗಳಿಗೆ, ಹೈನುಗಾರಿಕೆ ಮಾಡುವಂತವರಿಗೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷ ಧರ್ಮರೆಡ್ಡಿ, ಜಿಲ್ಲಾಧ್ಯಕ್ಷ ನರಸಿಂಹ ನಾಯಕ ಕಮಲಾಪೂರ, ಉಪಾಧ್ಯಕ್ಷ ಮಲ್ಲನಗೌಡ, ತಾಯಪ್ಪ ಕಮಲಾಪೂರ, ನರಸಿಂಹ ರೆಡ್ಡಿ ಗಾಣದಾಳ ಸೇರಿದಂತೆ ಅನೇಕ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net