ಕೊಬ್ಬರಿಗೆ ಕನಿಷ್ಠ ಬೆಂಬಲ ಘೋಷಣೆಗೆ ಒತ್ತಾಯಿಸಿ ರೈತ ಸಂಘ ಪ್ರತಿಭಟನೆ

Raitha sangha'
Published on

ಮೈಸೂರು: ಕೊಬ್ಬರಿಗೆ ಪ್ರತಿ ಕ್ವಿಂಟಾಲ್‌ಗೆ 20,000 ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘದಿಂದ ಸಂಸದ ಪ್ರತಾಪ್ ಸಿಂಹ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ಕೊಬ್ಬರಿ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಬೇಕು. ಎಳನೀರು ಮತ್ತು ತೆಂಗಿನಕಾಯಿಗೆ ಕನಿಷ್ಠ ಬೆಂಬಲ ಬೆಲೆ ನಿಗಿಪಡಿಸಬೇಕು, ಖರೀದಿಗೆ ಮಿತಿ ಹೇರದೆ ತೆಂಗಿನ ಉತ್ಪನ್ನವನ್ನು ಸಂಪೂರ್ಣವಾಗಿ ಖರೀದಿಸಬೇಕು ಮತ್ತು ಅದಕ್ಕೆ ಅವಶ್ಯಕತೆಯಿರುವಷ್ಟು ಹಣ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಮುಕ್ತ ಮಾರುಕಟ್ಟೆಯಯಲ್ಲಿ ತೆಂಗಿನ ಉತ್ಪನ್ನ ಮತ್ತು ಖಾದ್ಯ ತೈಲ ಆಮದನ್ನು ಕೂಡಲೇ ನಿಷೇಧಿಸಬೇಕು, ಕೇಂದ್ರ ಸರ್ಕಾರದ ಎಣ್ಣೆ ಉಪಯೋಗಿಸುವ ಕಾರ್ಖಾನೆಗಳು ಹಾಗೂ ಸಂಸ್ಥೆಗಳು ತೆಂಗಿನ ಎಣ್ಣೆಯನ್ನೇ ಉಪಯೋಗಿಸುವಂತೆ ಆದೇಶಿಸಬೇಕು, ಪೂರ್ಣ ಪ್ರಮಾಣದ ಖರೀದಿಯನ್ನು ದಾಸ್ತಾನು ಮಾಡಲು ಬೃಹತ್ ಗೋದಾಮುಗಳು ಹಾಗೂ ಶೀತಲೀಕರಣ ವ್ಯವಸ್ಥೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಲಾಯಿತು. ಪ್ರತಿಭಟನೆಯ ಬಳಿಕ ಸಂಸದರ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net