ತಾಪಂ ಕಚೇರಿ ಸ್ಥಳಾಂತರಕ್ಕೆ ರೈತಸಂಘ ಆಕ್ಷೇಪ

MLK MANAVI 07
Published on

ಮೊಳಕಾಲ್ಮೂರು: ಪಟ್ಟಣದ ಹೃದಯ ಭಾಗದಲ್ಲಿರುವ ತಾಲೂಕು ಪಂಚಾಯಿತಿ ಕಚೇರಿಯನ್ನು ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ತಾಲೂಕು ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ತಾಪಂ ಕಚೇರಿ ಪಟ್ಟಣದ ಮಧ್ಯ ಭಾಗದಲ್ಲಿರುವ ಕಾರಣ ಸಾರ್ವಜನಿಕರಿಗೆ ಅನುಕೂಲ ಆಗುತ್ತಿದೆ. ಹೊರವಲಯಕ್ಕೆ ಸ್ಥಳಾಂತರ ಮಾಡುವ ನಿರ್ಧಾರ ಸರಿಯಲ್ಲ ಎಂದರು.

ಹಾಲಿ ಇರುವ ತಾಪಂ ಕಚೇರಿ ಆವರಣದಲ್ಲಿ ಅಕ್ಷರ ದಾಸೋಹ, ಅಲ್ಪಸಂಖ್ಯಾತರ ಕಚೇರಿ ಸೇರಿ ವಿವಿಧ ಇಲಾಖೆಗಳ ಆಡಳಿತ ವ್ಯವಸ್ಥೆಗೂ ಅವಕಾಶ ಕಲ್ಪಿಸಿಕೊಟ್ಟಿದೆ. ಇಲ್ಲಿ ಲಭ್ಯವಿರುವ ವಿಶಾಲ ಮೈದಾನದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ರಾಜ್ಯ ಹಣಕಾಸು ಯೋಜನೆಡಿ 1.79 ಕೋಟಿ ರೂ. ಅನುದಾನ ಈ ಹಿಂದೆ ಬಿಡುಗೆಡೆ ಆಗಿದ್ದು, ಜತೆಗೆ ಅಂದಿನ ಶಾಸಕರು ಭೂಮಿ ಪೂಜೆ ನೆರವೇರಿಸಿದ್ದರು ಎಂದು ಹೇಳಿದರು.

ಜಿಲ್ಲಾ ಹಂತದ ಅಧಿಕಾರಿಗಳ ಕುಂದು ಕೊರತೆ ಸಭೆ, ತಾಪಂ ಪ್ರಗತಿ ಪರಿಶೀಲನೆ ಸಭೆ ಇತ್ಯಾದಿ ತಾಲೂಕು ಮಟ್ಟದ ಕಾರ್ಯಸೂಚಿ ಸಭೆಗಳನ್ನು ನಡೆಸಲು ಕೋಟ್ಯಂತರ ರೂ. ಹಣದಲ್ಲಿ ನಿರ್ಮಿಸಿರುವ ಸುಸ್ಸಜ್ಜಿತ ಸಭಾಂಗಣ ಇದೆ. ಇಷ್ಟೆಲ್ಲ ಸೌಲಭ್ಯ ಇರುವ ಕೇಂದ್ರ ಕಚೇರಿಯನ್ನು ಸ್ಥಳಾಂತರ ಮಾಡುವ ಉದ್ದೇಶವೇನು ಎಂದು ಪ್ರಶ್ನೀಸಿದರು.

ಹೊರವಲಯದಲ್ಲಿ ನಿರ್ಮಾಣಗೊಂಡರೆ ಗ್ರಾಮೀಣ ಪ್ರದೇಶದ ಜನರು 60 ರೂಪಾಯಿ ನೀಡಿ ಆಟೋಗಳಲ್ಲಿ ಸಂಚರಿಸಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಆಸ್ಪದ ಕೊಡಬಾರದು ಎಂದು ಆಗ್ರಹಿಸಿದ ಮುಖಂಡರು, ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ, ಮುಖಂಡರಾದ ಡಿ.ಸಿ. ನಾಗರಾಜ್, ಎಚ್.ಟಿ.ಚಂದ್ರಣ್ಣ, ಮಂಜುನಾಥ, ನಿಂಗಣ್ಣ, ಕನಕಶಿವಮೂರ್ತಿ, ಪಾಪಯ್ಯ, ನಾಗರಾಜ್, ಈರಣ್ಣ, ಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net