

ಗುಂಡ್ಲುಪೇಟೆ : ಕೆರೆಗಳಿಗೆ ನೀರು ತುಂಬಿಸುವಂತೆ ಹಾಗೂ ತಾಲೂಕಿನ ಶಿಂಡನಪುರ ಗ್ರಾಮ ಪಂಚಾಯಿತಿಯ ಮಾಜಿ ನೌಕರನಿಗೆ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ತಾಲೂಕು ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಹಸಿರು ಸೇನೆ ಹಾಗೂ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ಮಾತನಾಡಿ, ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬೆಳೆಗಳು ಹಾಳಾಗಿ ಕುಡಿಯುವ ನೀರಿಗೆ ತತ್ವಾರವಾಗುತ್ತಿದ್ದರೂ ಸಂಬಂಧಪಟ್ಟವರು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಆಸಕ್ತಿ ತೋರುತ್ತಿಲ್ಲ. ಇದರಿಂದ ಅಂತರ್ಜಲ ಕುಸಿಯುತ್ತಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇತ್ತ ಬರ ಪರಿಹಾರವನ್ನೂ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿಂಡನಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಲ್ಲಿನ ನೌಕರ ನಾಗೇಂದ್ರ ಎಂಬ ನೌಕರನಿಂದ ಬಲವಂತವಾಗಿ ರಾಜೀನಾಮೆ ಪಡೆದುಕೊಂಡಿದ್ದಾರೆ. ರಾಜೀನಾಮೆ ನೀಡಿದ ನಂತರವೂ 91 ಸಾವಿರ ರೂ. ವೇತನ ನೀಡದೆ ಸತಾಯಿಸುತ್ತಿದ್ದಾರೆ. ಸಾರ್ವಜನಿಕರ ಕೆಲಸಕಾರ್ಯ ಮಾಡಿಕೊಡಲು ವಿಳಂಬ ಮಾಡುತ್ತಿದ್ದಾರೆ. ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮ ವಹಿಸಿ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ತಾಪಂ ಇಒ ರಾಮಲಿಂಗಯ್ಯ ಗ್ರಾಮಪಂಚಾಯಿತಿ ಪಿಡಿಒ ವಿಜಯಾ ಜತೆ ಮಾತನಾಡಿ, ಮಾಹಿತಿ ಪಡೆದರು. ಸ್ಥಳದಲ್ಲಿಯೇ 21 ಸಾವಿರ ರೂ.ನ ಚೆಕ್ ನೀಡಿ ಬಾಕಿ ಹಣವನ್ನು ಮುಂದಿನ ವಾರದ ಒಳಗೆ ನೀಡಲಾಗುವುದು. ಜತೆಗೆ ಕೂಡಲೇ ಪಿಡಿಒ ಅವರನ್ನು ವರ್ಗಾಯಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ಮಹೇಶ್ ಮಾತನಾಡಿ, ನದಿಯಲ್ಲಿ ನೀರಿನ ಹರಿವು ಚೆನ್ನಾಗಿರುವುದರಿಂದ ತಾಲೂಕಿನ ಕೆರೆಗಳಿಗೆ ನದಿ ಮೂಲದಿಂದ ನೀರು ಹರಿಸಲಾಗುವುದು. ಗಾಂಧಿಗ್ರಾಮ ಯೋಜನೆಯಡಿ ತಾಲೂಕಿನ ಬೇಗೂರು ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ. ಫೆಬ್ರವರಿ ವೇಳೆಗೆ ಬಹುತೇಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು. ಸಂಘದ ತಾಲೂಕು ಅಧ್ಯಕ್ಷ ಹೊಸೂರು ಮಹೇಶ್, ಮುಖಂಡರಾದ ಹಾಲಹಳ್ಳಿ ಮಹೇಶ್, ವೃಷಭೇಂದ್ರ ಇತರರು ಇದ್ದರು.