

ಮಂಡ್ಯ: ರೈತರ ಬೆಳೆಗಳಿಗೆ ಎಂಎಸ್‌ಪಿ ಖಾತ್ರಿ ಆಗಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಶುಕ್ರವಾರ ರೈತಸಂಘಟನೆ, ಸಿಐಟಿಯು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಕಾರ್ಪೋರೇಟ್ ಕಂಪನಿಗಳ ಧೋರಣೆಗಳ ಪ್ರತಿಯನ್ನು ದಹಿಸಿ ಧಿಕ್ಕಾರದ ಘೋಷಣೆ ಕೂಗಿದರು. 1942ರ ಆ.9ರಂದು ಬ್ರಿಟಿಷರೇ ದೇಶಬಿಟ್ಟು ತೊಲಗಿ ಎಂಬ ಕರೆ ನೀಡಲಾಯಿತು. ಈ ಕರೆ ಇಡೀ ದೇಶವನ್ನು ಬಡಿದೆಬ್ಬಿಸಿತು. ದೇಶದುದ್ದಗಲಕ್ಕೂ ಹೋರಾಟಗಳು ನಡೆದವು. ಅದರ ಪರಿಣಾಮ ಬ್ರಿಟೀಷರು ಜಾಗ ಖಾಲಿ ಮಾಡಿದರು. ಭಾರತ ಬ್ರಿಟೀಷ್ ದಾಸ್ಯದಿಂದ ಹೊರಬಂದಿತು. ಅಂತೆಯೇ ಇಂದು ಕಾರ್ಪೋರೇಟ್ ಕಂಪನಿಗಳು ಭಾರತ ಬಿಟ್ಟು ತೊಲಗಬೇಕೆಂದು ಆಗ್ರಹಿಸಿದರು.
ವ್ಯಾಪಾರಕ್ಕಾಗಿ ಭಾರತಕ್ಕೆ ಕಾಲಿಟ್ಟ ಬ್ರಿಟಿಷ್ ಉದ್ದಿಮೆ ಈಸ್ಟ್ ಇಂಡಿಯಾ ಕಂಪನಿ ಸ್ಥಳೀಯ ಉದ್ದಿಮೆಗಳನ್ನು ನಾಶಗೊಳಿಸಿತು. ನಮ್ಮ ಸಂಪತ್ತನ್ನು ದೋಚಿದ್ದು ಮಾತ್ರವಲ್ಲ, ರಾಜ-ರಾಜರನ್ನು ಕಾದಾಡಿಸಿ, ನಂತರ ತಮ್ಮದೇ ಸೈನ್ಯ ಕಟ್ಟಿಕೊಂಡು ಆಕ್ರಮಣಗಳನ್ನು ನಡೆಸಿ ಅಬ್ಬಕ್ಕ, ಟಿಪ್ಪು, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ಆನೇಕ ದೇಶಪ್ರೇಮಿಗಳ ವಿರುದ್ಧ ಪಿತೂರಿ ನಡೆಸಿ ತಮ್ಮ ದಾಸ್ಯಕ್ಕೆ ಒಳಪಡಿಸಿಕೊಂಡರು. ಅದರಂತೆಯೇ ಇಂದು ಕಾರ್ಪೋರೇಟ್ ಕುಳಗಳು ಇಂದು ನಮ್ಮ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿವೆ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ರೈತರ ಲಕ್ಷಾಂತರ ಎಕರೆ ಭೂಮಿಗಳನ್ನು ವಶಪಡಿಸಿಕೊಂಡು ಕಂಪನಿಗಳಿಗೆ ನೀಡಲಾಗಿದೆ. ಖಾಸಗೀಕರಣದ ಹೆಸರಿನಲ್ಲಿ ನೂರಾರು ಸಾರ್ವಜನಿಕ ಉದ್ದಿಮೆಗಳನ್ನು ದುಗ್ಗಾಣಿ ಬೆಲೆಗೆ ಕೊಡಲಾಗಿದೆ. ಮಾಲ್‌ಗಳ ಮೂಲಕ ಚಿಲ್ಲರೆ ವ್ಯಾಪಾರಕ್ಕೂ ಕಂಪನಿಗಳಿಗೆ ಕಾಲಿಡಲು ಅವಕಾಶ ಕೊಟ್ಟು ಸಣ್ಣ ವ್ಯಾಪಾರಸ್ಥರನ್ನು ಮುಳುಗಿಸಲಾಗುತ್ತಿದೆ. ಭೂ ಕಾಯ್ದೆ ತಿದ್ದುಪಡಿ ಮೂಲಕ ರೈತರ ಭೂಮಿಯನ್ನು ಬಾಚಲು ಹೊರಟಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಕೃಷಿ ಮೇಲಿನ ಕಾರ್ಪೊರೇಟ್ ಆಕ್ರಮಣ ನಿಲ್ಲಬೇಕು. ರೈತರ ಹಾಗೂ ಜನಸಾಮಾನ್ಯರ ಬದುಕಿಗೆ ಕಂಟಕವಾಗಿರುವ ವಿದ್ಯುತ್ ಖಾಸಗಿಕರಣ ರದ್ದಾಗಬೇಕು. ಕಂಪನಿಗಳ ಹಿತ ಕಾಯಲು ತಂದಿರುವ ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳು ರದ್ದಾಗಬೇಕು. ಉದ್ಯೋಗ ಭದ್ರತೆ ದೇಶದ ನೀತಿ ಆಗಬೇಕು ಹಾಗೂ ವೈನಾಡು ಭೂಕುಸಿತ ಅತಿವೃಷ್ಟಿ ಅನಾವೃಷ್ಟಿ ಅಂತಹ ಪ್ರಾಕೃತಿಕ ವಿಕೋಪಗಳಿಗೆ ದೇಶವನ್ನು ತಳ್ಳುತ್ತಿರುವ ಕಾರ್ಪೊರೇಟ್ ಮಾದರಿ ಅಭಿವೃದ್ಧಿ ಕೊನೆಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು, ರೈತ ಸಂಘದ ಜಿಲ್ಲಾಧ್ಯಕ್ಷ ಕೆಂಪುಗೌಡ, ಸಿಐಟಿಯು ಸಿ.ಕುಮಾರಿ, ಬಿ.ಹನುಮೇಶ್, ಜಯರಾಮು, ಲಿಂಗಪ್ಪಾಜಿ, ಅರುಣ್‌ಕುಮಾರ್, ಅನಿತಾ, ರಾಮಣ್ಣ ಇತರರಿದ್ದರು.