ಪಹಣಿಯಲ್ಲಿ ವಕ್ಫ್ ಹೆಸರು ಕೈಬಿಡಲು ಆಗ್ರಹ: ನಗರದಲ್ಲಿ ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

Farmers union activists protest Mandya
Published on

ಮಂಡ್ಯ: ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರು ಕೈಬಿಡುವಂತೆ ಒತ್ತಾಯಿಸಿ ರೈತ ಸಂಘ(ಮೂಲ ಸಂಘಟನೆ ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಂಘದ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವುದರಿಂದ ಆತಂಕ ಸೃಷ್ಟಿಯಾಗಿದೆ. ಆದ್ದರಿಂದ ಕೂಡಲೇ ಹೆಸರು ಒತ್ತಾಯಿಸಿದರು.

ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಅಂತೆಯೇ ರೈತರಿಂದ ಖರೀದಿ ಮಾಡುವ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕೇಂದ್ರದ ದರದ ಜತೆಗೆ ರಾಜ್ಯ ಸರ್ಕಾರ 700 ರೂ ಪ್ರೋತ್ಸಾಹ ಧನ ನೀಡಬೇಕು. ಭತ್ತ ಕಟಾವು ಯಂತ್ರದ ಬಾಡಿಗೆ ದರ ದುಬಾರಿಯಾಗಿರುವುದರಿಂದ ಕೃಷಿ ಇಲಾಖೆ ಏಕದರ ನಿಗದಿ ಮಾಡಬೇಕು. ಮುಂದಿನ ಬೇಸಿಗೆ ಬೆಳೆ ಒಣಗದಂತೆ ಕೆಆರ್‌ಎಸ್ ಅಣೆಕಟ್ಟೆಯಿಂದ ನೀರು ಹರಿಸಲು ಮುಂದಾಗಬೇಕು. ಅರ್ಧಕ್ಕೆ ಸ್ಥಗಿತಗೊಂಡಿರುವ ವಿಶ್ವೇಶ್ವರಯ್ಯ ನಾಲೆ ಕಾಮಗಾರಿ ಪೂರ್ಣಗೊಳಿಸಬೇಕು. ಜತೆಗೆ ಉಪನಾಲೆಯನ್ನು ದುರಸ್ತಿಗೊಳಿಸಿ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.

ಕಬ್ಬು ಬೆಳೆ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಎಫ್‌ಆರ್‌ಪಿ ದರವನ್ನು ಕಬ್ಬು ಆಧಾರಿತ ಉಪ ಉತ್ಪನ್ನಗಳ ಬೆಲೆಗಳ ಆಧಾರದ ಮೇಲೆ ಪ್ರತಿ ಟನ್‌ಗೆ 4,500 ರೂ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆಯಲು ದಾಖಲಾತಿ ಒದಗಿಸಲು ರೈತರಿಗೆ ಕಷ್ಟವಾಗುತ್ತಿರುವುದರಿಂದ ದಾಖಲಾತಿ ಸರಳೀಕರಣ ಮಾಡಿ ಪುಣ್ಯ ಬಡ್ಡಿ ದರದಲ್ಲಿ 10 ಲಕ್ಷ ರೂವರೆಗೆ ಬೆಳೆ ಸಾಲ ನೀಡಲು ಮುಂದಾಗಬೇಕು. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ರೈತರು, ಸ್ತ್ರೀ ಶಕ್ತಿ ಮತ್ತು ಮಹಿಳಾ ಸಂಘಗಳ ಸದಸ್ಯರ ಆಧಾರ್ ಕಾರ್ಡ್ ಆಧಾರವಾಗಿಟ್ಟುಕೊಂಡು ಸಾಲ ನೀಡುತ್ತಿದ್ದು, ಇದರಿಂದ ಸಾಲದ ಕಂತು ಪಾವತಿ ಮಾಡಲು ಸಾಧ್ಯವಾಗದ ಹಲವರು ಆತ್ಮಹತ್ಯೆಗೆ ಶರಣಾಗುತ್ತಿರುವುದರಿಂದ ಮೈಕ್ರೋ ಫೈನಾನ್ಸ್ ಸಾಲ ವಸೂಲಿದಾರರು ಹಾಗೂ ಮುಖ್ಯಸ್ಥರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ರೈತರ ಬೇಡಿಕೆಗಳ ಬಗ್ಗೆ ನಿರ್ಲಕ್ಷೃ ವಹಿಸಿರುವುದನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ ಹರಿಯಾಣದ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ. ಈ ಕೂಡಲೇ ರೈತರ ಬೇಡಿಕೆಗಳಾದ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಜಾರಿ, ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯಂತೆ ಕನಿಷ್ಟ ಬೆಂಬಲ ಬೆಲೆ, ರೈತರ ಸಂಪೂರ್ಣ ಸಾಲಮನ್ನಾ, ಫಸಲ್ ಬಿಮ ಬೆಳೆ ವಿಮೆ ಪದ್ಧತಿ ನೀತಿ ಬದಲಾವಣೆ, 60 ವರ್ಷ ಪೂರೈಸಿದ ರೈತರಿಗೆ ಪಿಂಚಣಿ ಯೋಜನೆ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಉಪಾಧ್ಯಕ್ಷ ಕೆ.ನಾಗೇಂದ್ರಸ್ವಾಮಿ, ಸೋ.ಶಿ.ಪ್ರಕಾಶ್, ಎಚ್.ಜೆ.ಪ್ರಭುಲಿಂಗು, ಎಲ್.ಸುರೇಶ್, ಬಸವರಾಜು, ಕೆ.ಜೆ.ಉಮೇಶ್, ಅಣ್ಣೂರು ಮಹೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net