ಸುಳ್ಳಿಕಟ್ಟೆಗೆ ನೀರು ತುಂಬಿಸಲು ರೈತರ ಒಕ್ಕೊರಲ ಆಗ್ರಹ

5 mlv 1
ಮಳವಳ್ಳಿ ತಾಲೂಕಿನ ಹೊಸದೊಡ್ಡಿ ಸೇರಿದಂತೆ ಸುತ್ತಲಿನ ನಾಲ್ಕು ಗ್ರಾಮಗಳ ನಡುವೆ ಇರುವ ಸುಳ್ಳಿಕಟ್ಟೆ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಶುಕ್ರವಾರ ಬರಿದಾಗಿರುವ ಕೆರೆ ಅಂಗಳದಲ್ಲಿ ಜಾನುವಾರುಗಳು ಹಾಗೂ ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೊಸದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.
Published on

ಮಳವಳ್ಳಿ: ತಾಲೂಕಿನ ಹೊಸದೊಡ್ಡಿ ಬಳಿ ಇರುವ ಸುಳ್ಳಿಕಟ್ಟೆ ಕೆರೆಗೆ ನೀರು ತುಂಬಿಸುವಂತೆ ಆಗ್ರಹಿಸಿ ಶುಕ್ರವಾರ ಬರಿದಾಗಿರುವ ಕೆರೆ ಅಂಗಳದಲ್ಲಿ ಜಾನುವಾರುಗಳು ಹಾಗೂ ಕುರಿ, ಮೇಕೆಗಳನ್ನು ಹಿಡಿದುಕೊಂಡು ಹೊಸದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ರೈತರು ಪ್ರತಿಭಟನೆ ನಡೆಸಿದರು.

ಹೊಸದೊಡ್ಡಿ, ದಾಸನದೊಡ್ಡಿ, ಪಂಡಿತಹಳ್ಳಿ, ಮಂಚನಹಳ್ಳಿ ಗ್ರಾಮಗಳ ರೈತರು ತಾವು ಸಾಕಾಣಿಕೆ ಮಾಡಿರುವ ಕುರಿ ಮೇಕೆ, ಹಸುಗಳ ಸಮೇತ ಆಗಮಿಸಿ ಮೂಕಪ್ರಾಣಿಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದ್ದು, ಕೂಡಲೇ ಕೆರೆಯನ್ನು ತುಂಬಿಸುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.

ಹೊಸದೊಡ್ಡಿ ಗ್ರಾಮದ ಯಜಮಾನ್ ಕಾಳೇಗೌಡ ಮಾತನಾಡಿ, ಸುತ್ತಲಿನ ನಾಲ್ಕು ಗ್ರಾಮಗಳ ನಡುವೆ ಹಾಗೂ ಸುತ್ತಲೂ ಎರಡು ಕಿ.ಮೀ. ಸುತ್ತಳತೆಯ ಬಯಲು ಪ್ರದೇಶದಲ್ಲಿ ಸುಳ್ಳಿಕಟ್ಟೆ ಕೆರೆ ಇದ್ದು, ಮಳೆಗಾಲದಲ್ಲಿ ಮಳೆ ನೀರಿನಿಂದ ಇಲ್ಲಿನ ಕೆರೆಯಲ್ಲಿ ನೀರು ಶೇಖರಣೆಯಾಗುವ ಮೂಲಕ ಜಾನುವಾರುಗಳಿಗೆ ಕುಡಿಯುವ ನೀರುಣಿಸುವ ಜೀವಧಾರೆಯಾಗಿತ್ತು. ಆದರೆ ಪ್ರಸ್ತುತ ಎದುರಾಗಿರುವ ಬರದಿಂದ ಈ ಕಟ್ಟೆಯಲ್ಲಿ ನೀರು ಬರಿದಾಗಿದೆ. ಸುತ್ತಲಿನ ನಾಲ್ಕು ಗ್ರಾಮಗಳ ರೈತವರ್ಗ ತಾವು ಸಾಕಿರುವ ಜಾನುವಾರುಗಳನ್ನು ಇಲ್ಲಿನ ಬಯಲು ಪ್ರದೇಶದಲ್ಲಿ ಮೇಯಿಸಿಕೊಂಡು ಪ್ರಾಣಿಗಳ ದಾಹ ತಣಿಸಲು ಸುಳ್ಳಿಕಟ್ಟೆಯನ್ನೇ ಅವಲಂಬಿಸಿದ್ದರು. ಕಳೆದ ಆರು ತಿಂಗಳಿನಿಂದ ಕಟ್ಟೆಯಲ್ಲಿ ನೀರಿಲ್ಲದೇ ಒಣಗಿರುವುದರಿಂದ 2 ಕೀ.ಮೀ. ದೂರದಲ್ಲಿರುವ ಗ್ರಾಮಗಳಿಗೆ ತೆರಳಿ ಬಿಂದಿಗೆಗಳಲ್ಲಿ ನೀರು ತಂದು ಕುಡಿಸುತ್ತಿದ್ದು, ಇದು ಯಾವುದಕ್ಕೂ ಸಾಲದಂತಾಗಿ ಮೂಕಪ್ರಾಣಿಗಳು ನೀರಿಗಾಗಿ ಹಾಹಾಕಾರ ಪಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೆರೆಯ ಸಮೀಪ 120 ಮೀಟರ್ ಪಕ್ಕದಲ್ಲೇ ಹನಿ ನೀರಾವರಿ ಯೋಜನೆಯ ಪೈಪ್‌ಲೈನ್ ಹಾದು ಹೋಗಿದ್ದು, ಈ ಪೈಪ್‌ಲೈನ್ ಮೂಲಕ ಕೆರೆ ತುಂಬಿಸಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ನೀರು ತುಂಬಿಸಲು ಕ್ರಮ ವಹಿಸಬಹುದಾಗಿದ್ದರೂ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಿದ ಅವರು, ಕೆರೆಗೆ ನೀರು ತುಂಬಿಸುವ ನಮ್ಮ ಮನವಿಗೆ ಸ್ಪಂದಿಸಿದ್ದ ಶಾಸಕ ನರೇಂದ್ರಸ್ವಾಮಿ ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು , ಕೂಡಲೇ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರೂ ಕ್ಯಾರೆ ಎನ್ನದೆ ಸುಮ್ಮನಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಮಹದೇವು, ಮರಿದೇವೇಗೌಡ, ವೆಂಕಟರಮಣಯ್ಯ, ರವಿ, ಶಿವಕುಮಾರ್, ಕೆಂಚಪ್ಪ, ಮಹಾದೇವಯ್ಯ, ಶಿವನಂಜಯ್ಯ, ಪವನ್, ರಮೇಶ್ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net