

ಮಾನ್ವಿ: ಸುಲ್ತಾನಪುರದಿಂದ ರಾಯಚೂರುವರೆಗೆ ರೈಲ್ವೆ ಯೋಜನೆಗೆ ಅಗತ್ಯವಿರುವ 890 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಭೂಮಿ ನೀಡಿದ ಶೇ.90 ರೈತರ ಖಾತೆಗೆ ಅಗತ್ಯ ಪರಿಹಾರ ಜಮಾ ಮಾಡಲಾಗಿದೆ ಎಂದು ವಿಶೇಷ ಭೂಸ್ವಾಧಿನ ಅಧಿಕಾರಿ ಶ್ರುತಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಶೇ.10 ರೈತರು ವಿವಿಧ ಕಾರಣಗಳಿಗಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಅವರಿಗೆ ನೀಡಬೇಕಾದ ಪರಿಹಾರ ಕೂಡ ನ್ಯಾಯಾಲಯದಲ್ಲಿ ಜಮಾ ಮಾಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭೂಮಿ ನೀಡಿದ ಎಲ್ಲ ರೈತರಿಗೂ ಸರ್ಕಾರದಿಂದ ಪರಿಹಾರ ದೊರೆಯಲಿದೆ ಎಂದರು.
ಕಲ್ಮಲದಿಂದ ಮಾನ್ವಿವರೆಗೆ ಚತುಷ್ಪಥ ರಸ್ತೆ ನಿರ್ಮಾಣದ ಕಾಮಗಾರಿ ಗುತ್ತಿಗೆ ಪಡೆದಿರುವ ಸಂಸ್ಥೆಯಿಂದ ರಸ್ತೆ ಮಧ್ಯದಿಂದ ಎರಡು ಬದಿಯಲ್ಲಿ 15 ಮೀಟರ್‌ನಂತೆ 30 ಮೀಟರ್ 100 ಅಡಿಗಳಷ್ಟು ರಸ್ತೆ ನಿರ್ಮಾಣಕ್ಕೆ 2002ರಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, 15 ದಿನಗಳ ನಂತರ ಚತುಷ್ಪಥ ರಸ್ತೆ ಬದಿ ಗಿಡ ಬೆಳೆಸುವುದಕ್ಕೆ ಹಾಗೂ ಡ್ರೈನೇಜ್ ನಿರ್ಮಾಣಕ್ಕೆ ಒಂದು ಬದಿಯಲ್ಲಿ 7.5 ಮೀಟರ್‌ನಂತೆ ಎರಡು ಕಡೆಗಳಲ್ಲಿ 15 ಮೀಟರ್ ನಷ್ಟು ರೈತರ ಜಮೀನು ಅಗತ್ಯವಿದೆ. ಈ ಜಮೀನನ್ನು ಗುರುತಿಸಿ ಸ್ವಾಧಿನ ಪಡಸಿಕೊಳ್ಳುವುದಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ರಸ್ತೆ ನಿರ್ಮಾಣಕ್ಕೆ ವಶಪಡಿಸಿಕೊಂಡ ಜಮೀನಿನ ರೈತರಿಗೆ ಡಿಸೆಂಬರ್ ಅಂತ್ಯದೊಳಗೆ ಅಥವಾ ಜನವರಿ 2025ರ ಮೊದಲ ವಾರದೊಳಗಾಗಿ ಪರಿಹಾರ ರೈತರ ಖಾತೆಗೆ ಜಮಾ ಮಾಡಲಾಗುವುದು. 2002ರಲ್ಲಿ ಭೂಸ್ವಾಧೀನ ಪಡಿಸಿಕೊಂಡ ಕೆಲ ರೈತರಿಗೆ ಪರಿಹಾರ ದೊರೆತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಅಂತಹವರು ಸಿಂಧನೂರು ಇಲಾಖೆ ಕಚೇರಿಗೆ ಸಂಪರ್ಕಿಸಿ ನ್ಯಾಯಾಲಯದ ಮೂಲಕ ಪರಿಹಾರಕ್ಕೆ ಅಗತ್ಯವಾದ ದಾಖಲೆ ನೀಡಲಾಗುವುದು. ರೈತರ ಜಮೀನಿನ ತೋಟಾಗಾರಿಕೆ ಹಣ್ಣಿನ ಬೆಳೆಗಳು, ಗಿಡ ಮರಗಳ ಬಗ್ಗೆ ಅರಣ್ಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ವರದಿ ಪಡೆದು ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಹಿರಿಯ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ, ಕೃಷಿ ಇಲಾಖೆಯ ಅಧಿಕಾರಿ ಕಳಕಪ್ಪ ಇತರರಿದ್ದರು.