

ಕೆ.ಆರ್.ಸಾಗರ: ಮುಂಗಾರು ಕೃಷಿ ಚಟುವಟಿಕೆ ಆರಂಭವಾಗಿದ್ದರೂ ಅಧಿಕಾರಿಗಳು ನಾಲೆ ಸ್ವಚ್ಛತಾ ಕಾಮಗಾರಿ ಕೈಗೊಳ್ಳದೆ ಇರುವುದರಿಂದ ಬೆಳಗೊಳದ ಬಳಿ ರೈತರೇ ಸ್ವಚ್ಛತಾ ಕಾರ್ಯ ನಡೆಸಿದರು.
ಬೆಳಗೊಳ ಬಳಿಯ ಬಲಮುರಿ ಫಾಲ್ಸ್‌ನ ವಿರಿಜಾ ನಾಲೆಯಿಂದ ಸುಮಾರು 200 ಎಕರೆಯಷ್ಟು ಜಮೀನಿಗೆ ನೀರು ಪುರೈಸುವ 2 ಕಿ.ಮೀ. ಉದ್ದಕ್ಕೆ ನಾಲೆಯಲ್ಲಿ ಗಿಡಗಂಟಿ ಬೆಳೆದು, ತ್ಯಾಜ್ಯ ತುಂಬಿಕೊಂಡಿತ್ತು. ಇದರಿಂದ ರೈತರ ಜಮೀನಿಗಳಿಗೆ ನೀರು ಸರಾಗವಾಗಿ ಹರಿಯದ ಹಿನ್ನೆಲೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸ್ವಚ್ಛತಾ ಕಾಮಗಾರಿ ನಡೆಸುವಂತೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿಲ್ಲ. ಇದರಿಂದ ಬೇಸತ್ತ ರೈತರು, ತಾವೇ ಗುದ್ದಲಿ, ಕುಡುಗೋಲು ಹಿಡಿದು ನಾಲೆ ಸ್ವಚ್ಛತೆಗೊಳಿಸಿ, ಹೂಳು ತೆಗೆಯುವ ಕೆಲಸ ಆರಂಭಿಸಿದ್ದಾರೆ.
ಈಗಾಗಲೇ ಮಂಡ್ಯ ಜಿಲ್ಲೆಗೆ 2,000 ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿ ಸಂಪರ್ಕ ನಾಲೆಗಳ ಆಧುನೀಕರಣ ಮಾಡುವಂತೆ ಸೂಚಿಸಿದ್ದು, ಶ್ರೀರಂಗಪಟ್ಟಣ ತಾಲೂಕಿನ ವಿವಿಧೆೆಡೆ ನಾಲಾ ಆಧುನೀಕರಣ ಕಾಮಗಾರಿಗೆ ಸುಮಾರು 300ರಿಂದ 400 ಕೋಟಿ ರೂ.ನಷ್ಟು ಅನುದಾನ ನೀಡಲಾಗಿದೆ. ಕೆಲ ಸಂಪರ್ಕ ನಾಲೆಗಳ ಕಾಮಗಾರಿಗಳು ವಿಳಂಬವಾಗಿದ್ದು, ಮುಂಗಾರು ಬೆಳೆಗೆ ಬಿತ್ತನೆ ಬೀಜವನ್ನು ಹಾಕಲು ರೈತರಿಗೆ ತಡವಾಗುತ್ತಿದೆ. ಇತ್ತ ನೀರಾವರಿ ಅಧಿಕಾರಿಗಳು ಕಿವಿಗೊಡದ ಹಿನ್ನೆಲೆಯಲ್ಲಿ ಬೆಳಗೊಳ, ಕಾರೇಕುರ, ಹೊಸಹಳ್ಳಿ ಸೇರಿದಂತೆ ಈ ಭಾಗದ ರೈತರು ತಾವೇ ನಾಲೆ ಸ್ವಚ್ಛತೆಗೆ ಮುಂದಾಗಿದ್ದಾರೆ.
ಬೆಳಗೊಳ ಗ್ರಾಮದ ರೈತರಾದ ಚಾಮುಂಡಿ ರವಿ, ಯತೀಶ್, ನಾಗರಾಜು ಸೇರಿದಂತೆ ಇತರ ರೈತರು ಇದ್ದರು.