

ಕೆ.ಆರ್.ನಗರ: ರೇಷ್ಮೆ ಸರಳ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ಗಳಿಸುವ ಬೆಳೆಯಾಗಿದ್ದು, ರೈತರು ಇಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ಸಬಲರಾಗುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ವಿ.ಪಿ.ಕುಲದೀಪ್ ಸಲಹೆ ನೀಡಿದರು.
ತಾಲೂಕಿನ ಹೊಸ ಅಗ್ರಹಾರ ಗ್ರಾಮದಲ್ಲಿ ರೇಷ್ಮೆ ಇಲಾಖೆಯ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೇಷ್ಮೆ ಬೆಳೆಗೆ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದ್ದು, ಬೆಳೆಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರೇಷ್ಮೆ ಒಂದು ಬಾರಿ ಬೆಳೆದರೆ ಅದರ ನಿರ್ವಹಣೆಗೆ ಹೆಚ್ಚು ಕೂಲಿ ಕಾರ್ಮಿಕರ ಅವಶ್ಯಕತೆ ಇರುವುದಿಲ್ಲ. ಇದು ಕಡಿಮೆ ಖರ್ಚಿನಲ್ಲಿ ಬೆಳೆಯುವಂತಹ ಬೆಳೆಯಾಗಿದ್ದು, ಇದರಿಂದ ಖರ್ಚಿನ ಪ್ರಮಾಣ ಕಡಿಮೆಯಾಗಿ ಆದಾಯ ಮತ್ತು ಲಾಭದ ಪ್ರಮಾಣ ಹೆಚ್ಚುತ್ತಿರುತ್ತದೆ. ವಾಣಿಜ್ಯ ಬೆಳೆಗಳಲ್ಲಿ ಇದು ಕೂಡ ಒಂದಾಗಿದ್ದು, ರೈತರು ಹಿಪ್ಪು ನೇರಳೆ ಬೆಳೆಯುವ ಕಡೆಗೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಲೋಕೇಶ್ ಮಾತನಾಡಿ, ರೇಷ್ಮೆ ಕೃಷಿಯಲ್ಲಿ ಹಿಪ್ಪು ನೇರಳೆ ತೋಟದ ನಿರ್ವಹಣೆ ಹಾಗೂ ಹುಳುನಾಶ, ಮಾರಾಟದ ವಿಧಾನಗಳು, ತಾಂತ್ರಿಕ ಮಾಹಿತಿ ತಿಳಿಸಿದರು.
ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಶಿವಮೂರ್ತಿ ಮಾತನಾಡಿ, ರೇಷ್ಮೆ ಬೆಳೆಗಾರರಿಗೆ ಇಲಾಖೆಯಿಂದ ಇರುವ ಕಾರ್ಯಕ್ರಮಗಳು, ಅವುಗಳ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ವಿಸ್ತೃತವಾಗಿ ತಿಳಿಸಿದರು. ತಾಪಂ ವ್ಯವಸ್ಥಾಪಕ ಕೆ.ಎಸ್.ಸತೀಶ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ರೇಷ್ಮೆ ವಿಸ್ತರಣಾಧಿಕಾರಿ ಬಿ.ಎಸ್.ರಾಮಚಂದ್ರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಲ್ಯ, ಸದಸ್ಯೆ ಬೇಬಿ ಮಹೇಶ್, ರೇಷ್ಮೆ ಬೆಳೆಗಾರರು ಇದ್ದರು.