ಮಧ್ಯವರ್ತಿಗಳ ಹಾವಳಿಯಿಂದ ನಲುಗುತ್ತಿರುವ ರೈತರು : ರಾಜ್ಯ ರೈತ ಸಂಘ (ರೈತ ಬಣ) ಆಕ್ರೋಶ

PROTEST RAITHA images
Published on

ಮೈಸೂರು: ಜಿಲ್ಲೆಯ ತಾಲೂಕು ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ರೈತರು ನಲುಗಿ ಹೋಗಿದ್ದು, ಸರ್ಕಾರ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ರಾಜ್ಯ ರೈತ ಸಂಘ (ರೈತ ಬಣ) ಅಧ್ಯಕ್ಷ ಇ.ಎನ್.ಕೃಷ್ಣೇಗೌಡ ಆಗ್ರಹಿಸಿದರು.

ಕೆಲವರು ರೈತರ ಸೋಗಿನಲ್ಲಿ ಹಸಿರು ಟವಲ್ ಧರಿಸಿ ದರಖಾಸ್ತು ಭೂಮಿ ಕೊಡಿಸುತ್ತೇವೆ ಎಂದು ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದರೊಂದಿಗೆ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಸರ್ಕಾರಿ ಭೂಮಿಯನ್ನು ಬಡಾವಣೆ ಮಾಡುತ್ತಿದ್ದಾರೆ. ಅಧಿಕಾರಿಗಳು ಭೂಗಳ್ಳರೊಂದಿಗೆ ಕೈ ಜೋಡಿಸಿ ಸರ್ಕಾರಿ ಭೂಮಿ ಕಬಳಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಮಧ್ಯವರ್ತಿಗಳ ಹಾವಳಿಯಿಂದ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮಧ್ಯವರ್ತಿಗಳು ಒಬ್ಬರ ಜಮೀನನ್ನು ಮತ್ತೊಬ್ಬರ ಹೆಸರಿಗೆ ನೋಂದಾಯಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಪರಿಶೀಲಿಸಿ ಕ್ರಮ ವಹಿಸದೆ ಹೋದರೆ ರೈತರಿಗೆ ದೊಡ್ಡ ಅನ್ಯಾಯವಾಗಲಿದೆ. ಸರ್ಕಾರ ಸೂಕ್ತ ಕ್ರಮ ವಹಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಗೂ ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಹಾವಳಿ ಹೆಚ್ಚಾಗಿದ್ದು, ರೈತರು ಇವರ ಹಾವಳಿಯಿಂದ ಊರು ತೊರೆಯುತ್ತಿದ್ದಾರೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಮಯಕ್ಕೆ ಸರಿಯಾಗಿ ಸಾಲ ನೀಡದ ಹಿನ್ನೆಲೆಯಲ್ಲಿ ರೈತರು ಮೈಕ್ರೋ ಫೈನಾನ್ಸ್ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net