

ಮಂಡ್ಯ: ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಿ ಮಂಡ್ಯ ತಾಲೂಕು ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಆಗ್ರಹಿಸಿ ವಿವಿಧ ಗ್ರಾಮದ ರೈತರು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರ ಮೂಲಕ ಶಾಸಕ ರವಿಕುಮಾರ್ ಗಣಿಗ ಮತ್ತು ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಮಂಡ್ಯ ತಾಲೂಕಿನ ರೈತರ ಬಾಳಿಗೆ ಆಸರೆಯಾಗಿ ನಿಂತು ಅಭಿವೃದ್ಧಿಗೆ ಪೂರಕವಾಗಲೆಂದು ಸ್ಥಾಪಿಸಿದ ಮೈಶುಗರ್ ಕಾರ್ಖಾನೆಗೆ ದಶಕಗಳಿಂದ ಗ್ರಹಣ ಹಿಡಿದಿದೆ. ಸರ್ಕಾರಿ ಸ್ವಾಮ್ಯದಲ್ಲಿ ಕಾರ್ಖಾನೆ ನಡೆಸಲು ಪ್ರತೀ ವರ್ಷ ಅನುದಾನ ಬಿಡುಗಡೆ ಆಗುತ್ತಿದೆ. ಇಲ್ಲಿವರೆಗೂ ತೆರಿಗೆದಾರರ ದುಡ್ಡು ಸಾಕಷ್ಟು ಪ್ರಮಾಣದಲ್ಲಿ ವ್ಯಯವಾಗಿದ್ದರೂ ಸಹ ಕಬ್ಬು ಬೆಳೆದ ರೈತನಿಗೆ ಬೆಲೆಯಿಲ್ಲದಂತಾಗಿದೆ ಎಂದು ಆರೋಪಿಸಿದರು.
ತಾಲೂಕಿನಲ್ಲಿ 6-8 ಲಕ್ಷ ಟನ್‌ನಿಂದ ಕಬ್ಬು ಬೆಳೆಯಲಾಗುತ್ತಿದೆ. ಸಕ್ಕರೆ ಕಾರ್ಖಾನೆಯ ಅವ್ಯವಸ್ಥೆಯಿಂದಾಗಿ ಸಕಾಲದಲ್ಲಿ ಕಬ್ಬು ಕಟಾವಾಗದೆ ರೈತರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತೀ ವರ್ಷ ಸರ್ಕಾರಿ ಅನುದಾನ ಪಡೆದು ಕೇವಲ ಒಂದರಿಂದ ಎರಡು ಲಕ್ಷ ಟನ್ ಕಬ್ಬು ಅರೆಯುವ ಕೆಲಸ ನಡೆಯುತ್ತಿದೆ. ಸರಿಯಾದ ರೀತಿಯಲ್ಲಿ ಕಾರ್ಖಾನೆಯೂ ನಡೆಯದೆ ಸಕ್ಕರೆ ಉತ್ಪಾದನೆಯೂ ಆಗದೆ ಎಲ್ಲ ತರಹದಲ್ಲಿ ತೊಂದರೆಯಾಗುತ್ತಿದೆ. ಸಕಾಲದಲ್ಲಿ ಹಣ ಪಾವತಿಸುವಂತಹ ಖಾಸಗಿ ಸಂಸ್ಥೆಗೆ ವಹಿಸಿದಲ್ಲಿ ಈ ಭಾಗದ ಕಬ್ಬು ಬೆಳೆಗಾರರು, ಕಟಾವುದಾರರು ಹಾಗೂ ಸಾಗಾಣಿಕೆದಾರರಿಗೆ ನಿರಂತರ ಉದ್ಯೋಗ ಮತ್ತು ಸಂಪಾದನೆಗೆ ದಾರಿಯಾಗುತ್ತದೆ. ಆದ್ದರಿಂದ ಈ ಭಾಗದ ಕಬ್ಬು ಬೆಳೆಗಾರರ ಬದುಕು ಹಸನಾಗುವಂತೆ ಮಾಡಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ರೈತರಾದ ಎಸ್.ರವಿ, ಶಿವಪ್ರಸಾದ್, ಕೃಷ್ಣ, ಸತೀಶ್, ಮಹದೇವಯ್ಯ, ಪವನ್, ಮಹೇಶ್, ಪ್ರಕಾಶ್ ಇದ್ದರು.