

ಕಾರಟಗಿ: ತುಂಗಭದ್ರಾ ಜಲಾಶಯದಿಂದ ನದಿಗೆ ಬುಧವಾರ ಬೆಳಗ್ಗೆಯಿಂದ ಹೊರ ಹರಿವಿನ ಪ್ರಮಾಣ ಏಕಾಏಕಿ ಹೆಚ್ಚಾಗಿದ್ದರಿಂದ ತಾಲೂಕಿನ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದ್ದರಿಂದ ತುಂಗ ಮತ್ತು ಭದ್ರಾ ಜಲಾಶಯಕ್ಕೂ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಜು.31ರಂದು ತುಂಗಾ ಜಲಾಶಯದಿಂದ 42,562 ಮತ್ತು ಭದ್ರಾ ಜಲಾಶಯದಿಂದ 72,574 ಕ್ಯೂಸೆಕ್ ನೀರು ತುಂಗಾಭದ್ರಾ ಜಲಾಶಯಕ್ಕೆ ಹರಿದು ಬರುತ್ತಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯದಿಂದ ನದಿಗೆ 1.50ಲಕ್ಷ ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಜು.30ರಂದು ನೀರಿನ ಹರಿವು ಕಡಿಮೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಲು ನದಿ ಬಳಿ ಪಂಪ್‌ಸೆಟ್ ಅಳವಡಿಸಲು ಮುಂದಾಗಿದ್ದರು. ಈಗ ನದಿಗೆ ಡಿಧೀರ್ ನೀರಿನ ಹರಿವು ಹೆಚ್ಚಾಗಿದ್ದರಿಂದ ಪ್ರವಾಹ ಭೀತಿ ಎದುರಾಗಿದೆ. ಕೃಷಿ ಚಟುವಟಿಕೆ ಆರಂಭಿಸುವ ಕನಸಿನಲ್ಲಿದ್ದ ರೈತರಿಗೆ ಪ್ರವಾಹ ಭಗ್ನ ತಂದಿದೆ. ಅಲ್ಲದೇ ನದಿ ಬಳಿ ಅಳವಡಿಸಿದ್ದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಲು ರೈತರು ಹೆಣಗಾಡುತ್ತಿದ್ದಾರೆ.