ಮಾನವ ಸರಪಳಿ ನಿರ್ವಿುಸಿ ರೈತರ ಆಕ್ರೋಶ

farmers protest
Published on

ಹುಬ್ಬಳ್ಳಿ: ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಅನುಷ್ಠಾನ, ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಹುಬ್ಬಳ್ಳಿಯಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಸ್ಟೇಶನ್ ರಸ್ತೆಯ ಡಾ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೆರವಣಿಗೆ ಆರಂಭಿಸಿದ ರೈತರು ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ವಿುಸಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವ ಕೆಲ ಕಾಲ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ಸಂಚಾರ ರಸ್ತೆ ತಡೆ ನಡೆಸಿದರು. ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದರು. ಕರ್ತವ್ಯದ ಮೇರೆಗೆ ಬೇರೆಡೆ ತೆರಳಿದ್ದರಿಂದ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಲಿಲ್ಲ. ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ತಹಸೀಲ್ದಾರರು ಆಗಮಿಸಿ ರೈತರಿಂದ ಮನವಿ ಸ್ವೀಕರಿಸಿದರು. ಪೊಲೀಸ್​ರು ಬಿಗು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಮಾರ್ಗದಲ್ಲಿ 2 ತಾಸು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಧಾರವಾಡ, ಗದಗ, ಬಳ್ಳಾರಿ, ಹಾವೇರಿ, ಕೊಪ್ಪಳ, ಬಳ್ಳಾರಿ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ 700ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಾ. ಸ್ವಾಮಿನಾಥನ್ ವರದಿ ಜಾರಿಯಾಗಬೇಕು. ರಾಜ್ಯಾದ್ಯಂತ ಬರಗಾಲವಿದ್ದು, ರೈತರ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರದ ಮಾದರಿಯಲ್ಲಿ ಬೆಳೆ ವಿಮೆ ಪರಿಹಾರ ಒದಗಿಸಬೇಕು. ಬೆಣ್ಣಿ ಹಳ್ಳ ಪ್ರವಾಹ ನಿಯಂತ್ರಿಸುವ ಶಾಶ್ವತ ಯೋಜನೆ ಜಾರಿಯಾಗಬೇಕು. ಕೃಷ್ಣಾ ನದಿ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕು. ತುಂಗಭದ್ರಾ ನದಿ ತುಂಬಾ ಹೂಳು ತುಂಬಿದ್ದು, ನಲವೆ ಹತ್ತಿರ ಹೊಸದಾಗಿ ಜಲಾಶಯ ನಿರ್ವಿುಸಬೇಕು. ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿರುವ ಮೂರು ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಮನವಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ವಾಸುದೇವ ಮೇಟಿ, ಉಪಾಧ್ಯಕ್ಷ ಬಸವರಾಜ ಬೆಳ್ಳಿಕಟ್ಟಿ, ವಿ.ಎಸ್. ಕಂಠೆಪ್ಪಗೌಡ್ರ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಯಲ್ಲಪ್ಪ ಶಿಗ್ಗಾಂವಿ, ಶಿವಾನಂದ ಮಾಯಕಾರ, ಕುಬೇರ ಅಂಗಡಿ, ಹನುಮಂತಪ್ಪ ಚಲವಾದಿ, ಶಂಕರ ಪೂಜಾರ, ಮಹೇಶಪ್ಪ ಕೋಳಿವಾಡ, ಬಸವರಾಜ ಕೆರೂರ, ರಾಜು ನಾಯಕವಾಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net