

ಹುಬ್ಬಳ್ಳಿ: ರೈತರು ಮತ್ತವರ ಮಕ್ಕಳ ವಿದ್ಯಾಭ್ಯಾಸಕ್ಕೆ ರಾತ್ರಿ ಹೊತ್ತು ವಿದ್ಯುತ್ ಪೂರೈಸಬೇಕು. ಸಾಲ ಮನ್ನಾ ಮಾಡಬೇಕು. ಹಳೆಯ ವಿದ್ಯುತ್ ಕಂಬ ಮತ್ತು ತಂತಿ ಬದಲಿಸಬೇಕು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು, ಇಲ್ಲಿಯ ನವನಗರದ ಹೆಸ್ಕಾಂ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಸೋಮವಾರ ಆರಂಭಿಸಿದರು.
ಸೇನೆ ಅಧ್ಯಕ್ಷ ಚುನಪ್ಪ ಪೂಜೇರಿ ಮಾತನಾಡಿ, ರಂಗರಾಜ್ ವರದಿಯನ್ವಯ ರೈತರ ಬೆಳೆಗೆ ವೈಜ್ಞಾನಿಕ ದರ ನಿಗದಿಪಡಿಸಬೇಕು. ಅಥಣಿ ತಾಲೂಕಿನ ವಿದ್ಯುತ್ ಬಾಕಿ 30 ಕೋಟಿ ರೂ. ಮನ್ನಾ ಮಾಡಬೇಕು. ಅಕ್ರಮ-ಸಕ್ರಮ ಮತ್ತು ಸಕ್ರಮಕ್ಕೆ ಶೀಘ್ರವೇ ಸಂಪರ್ಕ ಮುಂದುವರಿಸಬೇಕು. ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು. ದುಡಿತಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬುದೇ ನಮ್ಮ ಹಕ್ಕು. ನಾವೇನು ಬಿಟ್ಟಿ ಗ್ಯಾರಂಟಿ ಕೊಡಿ ಎಂದು ಬೇಡಿದ್ದೇವೆಯೇ?. ಅದರ ಅವಶ್ಯಕತೆ ನಮ್ಮಗಿರಲಿಲ್ಲ. ಒಂದಿಷ್ಟು ಕೊಟ್ಟಂತೆ ಮಾಡಿ ರಾಜ್ಯ ಸರ್ಕಾರ ಎಲ್ಲವುಗಳ ದರ ಹೆಚ್ಚಿಸಿ ಜನರನ್ನು ವಂಚಿಸುತ್ತಿದೆ. ಸಂಜೆ 6ರಿಂದ ಬೆಳಗಿನ ಜಾವ 6ರವರೆಗೆ ನಿರಂತರವಾಗಿ ವಿದ್ಯುತ್ ಪೂರೈಸಬೇಕು. ನಾವೇನು ಕೈಗಾರಿಕೆಗೆ ವಿದ್ಯುತ್ ಬಳಸುತ್ತಿಲ್ಲ. ರೈತರ ಮನೆಗಳಿಗೆ ವಿದ್ಯುತ್ ಕೊಡಲ್ಲ ಎಂದಾದರೆ, ಸಚಿವರು ಮತ್ತು ಶಾಸಕರ ಮನೆಗೂ ವಿದ್ಯುತ್ ಕಡಿತ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದ ದಿನೇಶ ಸಿರವಾರ ಮಾತನಾಡಿ, ಟಿಸಿ ಬದಲಿಸಲು, ದುರಸ್ತಿ ಮಾಡಲು ತಿಂಗಳವರೆಗೆ ಬೇಕು. ವಿದ್ಯುತ್ ಬಿಲ್ ಪಾವತಿಸಿದದಿದ್ದರೆ ತಕ್ಷಣ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗುತ್ತಿದೆ. ಮರು ಸಂಪರ್ಕ ಕಲ್ಪಿಸಲು ನಾಲ್ಕೈದು ದಿನ ತೆಗೆದುಕೊಳ್ಳುತ್ತಾರೆ. ನಮ್ಮ ಹಕ್ಕಿಗಾಗಿ ನಾವು ಒಗ್ಗೂಡಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಮೈಸೂರಿನ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಮೈಕ್ರೋಪೈನಾನ್ಸ್ ಕಂಪನಿಗಳಿಗಿಂತ ದೊಡ್ಡ ಕಿರುಕುಳ ರೈತರಿಗೆ ಹೆಸ್ಕಾಂ ಇಲಾಖೆಯಿಂದ ಆಗುತ್ತಿದೆ. ರೈತರು ತಮ್ಮ ಸ್ವಂತ ಖರ್ಚಿನಲ್ಲಿ ಪಂಪ್‌ಸೆಟ್ ಅಳವಡಿಸಿಕೊಂಡಿದ್ದಾರೆ. ಅದಕ್ಕಾದ 30 ಕೋಟಿ ರೂ. ವೆಚ್ಚ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ ಮಾತನಾಡಿ, ಹೆಸ್ಕಾಂ ವ್ಯಾಪ್ತಿಯ ಏಳು ಜಿಲ್ಲೆಗಳ ಸಚಿವರು ಸೇರಿ ಸಿಎಂ ಜತೆ ಚರ್ಚಿಸಿ ನಿಮ್ಮ ಸಮಸ್ಯೆ, ಬೇಡಿಕೆ ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಹೇಳುತ್ತಿದ್ದಂತೆ ಸಿಟ್ಟಾದ ಪ್ರತಿಭಟನಾಕಾರರು ಮೇಲೆದ್ದು ಗಲಾಟೆ ನಡೆಸಿದರು.
ನಮಗೆ ಇಂದೇ ವಿದ್ಯುತ್ ಸಂಪರ್ಕ ಒದಗಿಸಬೇಕು. ವಿದ್ಯುತ್ ಸಚಿವ ಕೆ.ಜೆ. ಜಾರ್ಜ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಬೇಕು. ಲಿಖಿತ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು. ಕೆಲಹೊತ್ತು ಸಂಚಾರ ತಡೆ ನಡೆಸಿದರು.
ಹೆಸ್ಕಾಂ ಎಂಡಿ ಎಂ. ವೈಶಾಲಿ, ಪಡಸಲಗಿಯ ಶಶಿಕಾಂತ ಗುರೂಜಿ, ಸುಭಾಷಗೌಡ, ಮೈಸೂರಿನ ಫಯಾಜ್, ಗದಗಿನ ವಿಜಯಕುಮಾರ, ರಾಯಚೂರಿನ ಶರಣಪ್ಪ ಅರಳಿ, ರಾಜು ಪವಾರ, ಕಿಶನ್ ನಂದಿ, ರಾಜಕುಮಾರ ಜಂಬಗಿ, ಚಿಕ್ಕೋಡಿಯ ಮಲ್ಲಪ್ಪಣ್ಣ ಅಂಗಡಿ, ಪ್ರಕಾಶ ನಾಯಕ, ಬೆಳಗಾವಿ ಜಿಲ್ಲಾಧ್ಯಕ್ಷೆ ಆಶಾ ಎಂ., ವಾಸು ಪಂಡ್ರೊಳ್ಳಿ ಇತರರು ಪಾಲ್ಗೊಂಡಿದ್ದರು.