

ಮುಂಡರಗಿ: ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಉತ್ತಮ ಮಳೆ ಸುರಿದಿದ್ದು, ರೈತರು ಜಮೀನು ಹದಗೊಳಿಸಿ ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ.
ತಾಲೂಕಿನಲ್ಲಿ ಏಪ್ರಿಲ್ ಹಾಗೂ ಮೇನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದೆ. ಏಪ್ರಿಲ್‌ನಲ್ಲಿ ವಾಡಿಕೆ ಮಳೆ 36.7 ಮಿ.ಮೀ. ಬದಲಿಗೆ 61.2 ಮಿ.ಮೀ. ಮಳೆ ಸುರಿದಿದೆ. ಮೇ 1ರಿಂದ 26ರವರೆಗೆ ವಾಡಿಕೆ ಮಳೆ 53.7 ಮಿ.ಮೀ. ಪೈಕಿ 109 ಮಿ.ಮೀ. ಮಳೆಯಾಗಿದೆ. ಮುಂಗಾರು ಪೂರ್ವ ಮಳೆಗಳು ಉತ್ತಮವಾಗಿ ಸುರಿದಿದ್ದರಿಂದ ಭೂಮಿ ಹದಗೊಳಿಸುವ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಪ್ರತಿವರ್ಷದಂತೆ ರೋಹಿಣೆ ಮಳೆಗೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ.
ಬಿತ್ತನೆ ಗುರಿ: ತಾಲೂಕಿನ ನೀರಾವರಿ ಹಾಗೂ ಖುಷ್ಕಿ ಭೂಮಿ 51,360 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ ಪ್ರಮುಖ ಬೆಳೆಗಳಾದ ಭತ್ತ 3,040, ಹೈಬ್ರಿಡ್ ಜೋಳ 960, ಗೋವಿನಜೋಳ 28,700, ಸಜ್ಜೆ 425, ತೊಗರಿ 300, ಹೆಸರು 8,100, ಶೇಂಗಾ 2,650, ಸೂರ್ಯಕಾಂತಿ 5,730, ಹತ್ತಿ 485 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಲಿದೆ. ಈಗಾಗಲೇ 725 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಿದೆ. ಬೀಜ ದಾಸ್ತಾನು: ಮುಂಡರಗಿ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಗಳಾದ ಹೆಸರು 20, ತೊಗರಿ 20, ಜೋಳ 5, ಸಜ್ಜೆ 5, ಗೋವಿನಜೋಳ 200, ಸೂರ್ಯಕಾಂತಿ 5 ಕ್ವಿಂಟಾಲ್ ಸಂಗ್ರಹವಿದೆ. ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು 25, ತೊಗರಿ 20, ಜೋಳ 5, ಸಜ್ಜೆ 5, ಗೋವಿನಜೋಳ 200, ಸೂರ್ಯಕಾಂತಿ ಬೀಜ 5 ಕ್ವಿಂಟಾಲ್ ಸಂಗ್ರಹ ಮಾಡಲಾಗಿದೆ.
ಮುಂಗಾರು ಮಳೆ ಉತ್ತಮವಾಗಿರುವುದರಿಂದ ಒಳ್ಳೆಯ ಫಸಲು ಬರುವ ನಿರೀಕ್ಷೆ ಇದೆ. ಭೂಮಿ ಹದ ಮಾಡಿಕೊಂಡು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದೇವೆ. ಬೆಳೆಗೆ ಅನುಕೂಲಕ್ಕೆ ತಕ್ಕಂತೆ ಮಳೆಯಾದರೆ ಉತ್ತಮ ಇಳುವರಿ ಬರುವುದರಲ್ಲಿ ಸಂದೇಹವಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಬೇಕು. ವೆಂಕಟೇಶ ದಾಸರ, ಮಕ್ತುಂಪುರ ರೈತ ರೈತರಿಗೆ ಅವಶ್ಯವಿರುವ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರದಿಂದ ವಿತರಣೆ ಮಾಡಲಾಗುತ್ತಿದೆ. ರೈತರಿಗೆ ಅಗತ್ಯವಿರುವ ರಸಗೊಬ್ಬರಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಡಿಎಪಿಗೆ ಪರ್ಯಾಯವಾಗಿಯೂ ಸಂಯುಕ್ತ ಗೊಬ್ಬರ ಬಳಕೆ ಮಾಡಬೇಕು. ಮುಂಗಾರು ಪೂರ್ವ ಸಿದ್ಧತಾ ಅಭಿಯಾನ ಕಾರ್ಯಕ್ರಮಗಳ ಮೂಲಕ ರೈತರಿಗೆ ಮಣ್ಣಿನ ಪರೀಕ್ಷೆ, ಗುಣಮಟ್ಟದ ಬೀಜಗಳ ಆಯ್ಕೆ, ಬಿತ್ತನೆ ಪೂರ್ವ ಬೀಜೋಪಚಾರ ಹಾಗೂ ಸಂಯುಕ್ತ ಗೊಬ್ಬರಗಳ ಬಳಕೆ ಕುರಿತು ತರಬೇತಿ ನೀಡಲಾಗಿದೆ. ಪ್ರಾಣೇಶ ಎಚ್., ಸಹಾಯಕ ಕೃಷಿ ನಿರ್ದೇಶಕ ಮುಂಡರಗಿ