

ಲಕ್ಷ್ಮೇಶ್ವರ: ವಿದ್ಯಾದಾನಕ್ಕಿಂತ ಶ್ರೇಷ್ಠದಾನ ಮತ್ತೊಂದಿಲ್ಲ. ಸರ್ಕಾರಿ ಶಾಲೆಯಲ್ಲಿ ಕಲಿತ ಆರ್ಥಿಕವಾಗಿ ಸಬಲರಾದ ಹಳೆ ವಿದ್ಯಾರ್ಥಿಗಳು ಆ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ವರ್ತಕರ ಸಮುದಾಯ ಭವನದಲ್ಲಿ ಜಗದ್ಗುರು ಶ್ರೀ ಗಂಗಾಧರ ಸರ್ಕಾರಿ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನಾ, ಸ್ನೇಹ ಸಮ್ಮಿಲನ, ನಿವೃತ್ತ ಯೋಧರು, ಪ್ರಗತಿಪರ ರೈತರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅನ್ನ ನೀಡುವ ರೈತರು, ದೇಶ ಕಾಯುವ ಸೈನಿಕರು, ಅಜ್ಞಾನ-ಅಂಧಕಾರ ತೊಡೆದು ಜ್ಞಾನದ ಬೆಳಕು ಮೂಡಿಸುವ ಶಿಕ್ಷಕರು ಸದಾ ಸ್ಮರಣೀಯರು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ಎಚ್.ಸಿ. ರಟಗೇರಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಣ ಅಧಿಕಾರಿಗಳಾದ ಎಂ.ಎಂ. ಹವಳದ, ಆರ್.ಎನ್. ಪಂಚಬಾವಿ, ಮುಖ್ಯೋಪಾಧ್ಯಾಯ ಬಿ.ಸಿ. ಪಟ್ಟೇದ, ಎ.ಎಸ್. ತೋರಾತ, ಸಿ.ಎಸ್. ನದಾಫ, ಎ.ಎಸ್. ಪಾಟೀಲ, ಎಲ್.ವಿ. ಮುದೇನೂರ, ಐ.ಸಿ. ಕಣವಿ, ವಿ.ಜಿ. ಜಾಧವ, ಎಂ.ಆರ್. ಹಿರೇಮಠ, ಶಿಕ್ಷಕರ ಸಿಬ್ಬಂದಿ, ಹಳೆಯ ವಿದ್ಯಾರ್ಥಿಗಳು, ಎಸ್‌ಡಿಎಂಸಿಯವರು ಇದ್ದರು. ಮುದಗಲ್, ಚಂದ್ರು ಮಾಗಡಿ ನಿರೂಪಿಸಿದರು.