ಬಾಕಿ ಪಾವತಿಗೆ ಒತ್ತಾಯಿಸಿ ರೈತ ಧರಣಿ

Pratibhatane
Published on

ಮುಂಡರಗಿ: ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ತಾಲೂಕಿನ ಗಂಗಾಪೂರ ವಿಜಯನಗರ ಸಕ್ಕರೆ ಕಾರ್ಖಾನೆ ಮುಂದೆ ಕೊಪ್ಪಳ ಜಿಲ್ಲೆಯ ಅಳವಂಡಿ ಗ್ರಾಮದ ರೈತ ಗವಿಸಿದ್ದರಡ್ಡಿ ಗದ್ದಿಕೇರಿ ಎಂಬುವವರು ಗುರುವಾರ ಧರಣಿ ನಡೆಸಿದರು.

ರೈತ ಗವಿಸಿದ್ದರಡ್ಡಿ ಮಾತನಾಡಿ, 4 ಎಕರೆಯಲ್ಲಿ ಕಬ್ಬು ಬೆಳೆಯಲಾಗಿತ್ತು. ಜನೆವರಿ ತಿಂಗಳಲ್ಲಿ ಕಬ್ಬು ಕಟಾವು ಮಾಡಿಸಲಾಗಿದೆ. ವಿಜಯನಗರ ಸಕ್ಕರೆ ಕಾರ್ಖಾನೆಯವರು ಕಬ್ಬು ಕಟಾವು ಮಾಡಿಸಿ ಐದು ತಿಂಗಳು ಕಳೆದರೂ ಬಾಕಿ ಹಣ ನೀಡುತ್ತಿಲ್ಲ. ಕಬ್ಬು ಕಟಾವು ಮಾಡುವುದಕ್ಕೆ ಅನುಕೂಲವಾಗಲಿದೆ ಎಂದು ಹೇಳಿ ಕಾರ್ಖಾನೆ ಮ್ಯಾನೇಜರ್ ಕಬ್ಬಿಗೆ ಬೆಂಕಿ ಹಚ್ಚಿಸಿ ನಂತರ ಕಟಾವು ಮಾಡಿದರು. 89ಟನ್ ಕಬ್ಬು ಬಂದಿತ್ತು. ಪ್ರತಿ ಟನ್‌ಗೆ 2,400 ರೂ.ಯಂತೆ 2.13ಲಕ್ಷ ರೂ. ಕೊಡಬೇಕಿತ್ತು. ಅದರಲ್ಲಿ ಬೀಜ, ಗೊಬ್ಬರ ಸೇರಿ 1ಲಕ್ಷ ರೂ. ಬಾಕಿ ತೆಗೆದು ಕೇವಲ 19,636ರೂ.ಗಳನ್ನು ಮಾರ್ಚ್‌ನಲ್ಲಿ ನೀಡಿದ್ದರು. ಇನ್ನುಳಿದ 95ಸಾವಿರ ರೂ. ಬಾಕಿ ನೀಡಲು ಸತಾಯಿಸುತ್ತಿದ್ದಾರೆ ಎಂದು ದೂರಿದರು.

ಕಾರ್ಖಾನೆಯ ಎಜಿಎಂ ದೇವೀರಪ್ಪ ಕೆ. ಅವರು ಅಳವಂಡಿ ಗ್ರಾಮದ ರೈತ ಪ್ರಮುಖರೊಂದಿಗೆ ಚರ್ಚಿಸಿದರು. ಕಬ್ಬು ಸುಟ್ಟಿದ್ದರಿಂದ ಬಾಕಿ ಹಣ ಪಾವತಿಗೆ ತಡವಾಗಿದೆ. ರೈತನ ಬೇಡಿಕೆಯಂತೆ ಹಣ ಪಾವತಿಸಲು ಮೇಲಧಿಕಾರಿಗಳಿಗೆ ತಿಳಿಸಿದ್ದೇವೆ. ಶೇ.10ರಷ್ಟು ಹಣ ನೀಡಲು ಅವರು ತಿಳಿಸಿದ್ದಾರೆ. ಸದ್ಯ 30ಸಾವಿರ ರೂ. ನೀಡಲಾಗುತ್ತದೆ. ಬಾಕಿ ಹಣ ನೀಡಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು. ನಂತರ ರೈತ ಗವಿಸಿದ್ದರಡ್ಡಿ ಪ್ರತಿಭಟನೆ ಕೈಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net