ಹಿರೇವಡ್ಡಟ್ಟಿ ಪಂಪ್‌ಹೌಸ್‌ಗೆ ರೈತರ ಮುತ್ತಿಗೆ

Published on

ಡಂಬಳ: ಹನಿ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ರೈತರ ಜಮೀನುಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಪಂಪ್‌ಹೌಸ್‌ಗೆ ಶುಕ್ರವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಾವಿರಾರು ಹೆಕ್ಟೇರ್‌ನಲ್ಲಿನ ರೈತರ ಜಮೀನುಗಳಿಗೆ ಸೂಕ್ಷ್ಮ ಹನಿ ನೀರಾವರಿ ಯೋಜನೆ ಅಳವಡಿಸಲಾಗಿದೆ. ಮಳೆ ಸರಿಯಾಗಿ ಆಗುತ್ತಿಲ್ಲ. ಮಳೆ ಕೊರತೆ ಪರಿಣಾಮ ಈರುಳ್ಳಿ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಒಣಗುತ್ತಿವೆ. ತುಂಗಭದ್ರಾ ನದಿ ಭರ್ತಿಯಾಗಿ ಬೃಹತ್ ಕಾಲುವೆ ಮೂಲಕ ನೀರು ಹರಿಯುತ್ತಿದ್ದರೂ ಸೂಕ್ಷ್ಮ ಹನಿ ನೀರಾವರಿ ಯೋಜನೆಯ ಜಮೀನುಗಳಿಗೆ ನೀರು ಹರಿಸಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ರೈತ ಮುಖಂಡ ಸಣ್ಣಹನುಮಪ್ಪ ಬಂಡಿ ಮಾತನಾಡಿ, ಸಾವಿರಾರು ರೂ. ಖರ್ಚು ಮಾಡಿ ರೈತರು ಬಿತ್ತನೆ ಮಾಡಿದ್ದಾರೆ. ತೇವಾಂಶ ಕೊರತೆ ಪರಿಣಾಮ ಬೆಳೆಗಳು ಒಣಗುತ್ತಿವೆ. ಒಂದು ತಿಂಗಳಿನಿಂದ ಇಲಾಖೆ ಅಧಿಕಾರಿಗಳಿಗೆ ಹಾಗೂ ಯೋಜನೆ ಗುತ್ತಿಗೆ ಪಡೆದಿರುವ ಕಂಪನಿಯವರಿಗೆ ನೀರು ಹರಿಸುವಂತೆ ಬೇಡಿಕೊಂಡರು ಸ್ಪಂದಿಸುತ್ತಿಲ್ಲ. ಯೋಜನೆಯು ಸಮರ್ಪವಾಗಿ ಬಳಕೆಯಾಗುತ್ತಿಲ್ಲ ಎಂದು ದೂರಿದರು.
ರೈತ ಬಸವರಾಜ ಕೊತಂಬ್ರಿ ಮಾತನಾಡಿ, ತುಂಗಭದ್ರಾ ನದಿಯ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದರೂ ರೈತರು ನೀರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ರೈತರ ಜಮೀನುಗಳಿಗೆ ನೀರು ಹರಿಸದೆ ಹೋದರೆ ಜಿಲ್ಲಾ ಮಟ್ಟದಲ್ಲಿ ದೊಡ್ಡ ಹೋರಾಟ ಹಮ್ಮಿಕೊಳ್ಳಲಾಗುವುದು. ಇಲಾಖೆಯ ಅಧಿಕಾರಿಗಳು ಮತ್ತು ಯೋಜನೆಯ ಕಾಮಗಾರಿ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯವರು ರೈತರ ಬದುಕಿನೊಂದಿಗೆ ಆಟವಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಮಧ್ಯಪ್ರವೇಶ ನೀರು ಹರಿಸಬೇಕೆಂದು ಆಗ್ರಹಿಸಿದರು.
ರೈತರಾದ ಸಿದ್ದಪ್ಪ ಹೊಂಬಳ, ಭೀರಪ್ಪ ಪೂಜಾರ, ಫಕೀರಪ್ಪ ಆದಮ್ಮನವರ, ಅಬ್ದುಲ್‌ಸಾಬ್ ಕಾಸ್ತಾರ, ಮಾರುತಿ ಕಾತರಕಿ, ಶಿವಪ್ಪ ಬಂಡಿ, ಸೋಮಪ್ಪ ಹೊಂಬಳ, ಮಾಳಿಂಗರಾಯ ಕಣವಿ, ರವಿ ಡೊಳ್ಳಿನ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net