ಭಾರಂಗಿ ಗ್ರಿಡ್‌ಗೆ ಏಕಾಏಕಿ ರೈತರ ಮುತ್ತಿಗೆ

1sor2
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಸೊರಬ ತಾಲೂಕಿನ ಭಾರಂಗಿ ವಿದ್ಯುತ್ ಗ್ರೀಡ್‌ಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Published on

ಸೊರಬ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ತಾಲೂಕಿನ ಭಾರಂಗಿ ವಿದ್ಯುತ್ ಗ್ರೀಡ್‌ಗೆ ರೈತರು ಶುಕ್ರವಾರ ಸಂಜೆ ಏಕಾಏಕಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ತಾಲೂಕಿನ ಆನವಟ್ಟಿ ಹೋಬಳಿಯ ಭಾರಂಗಿ ಗ್ರಾಮದಲ್ಲಿ ಇರುವ ವಿದ್ಯುತ್ ಗ್ರೀಡ್‌ನಿಂದ ತ್ರೀ ಪೇಸ್ ವಿದ್ಯುತ್ ಸಮಪರ್ಕವಾಗಿ ನೀಡುತ್ತಿಲ್ಲ. ಆನವಟ್ಟಿ ಹಾಗೂ ಕೋಟಿಪುರ ಭಾಗಗಳಿಗೆ ವಿದ್ಯುತ್ ಕಡಿತಗೊಳಿಸದೆ ಭಾರಂಗಿ ಗ್ರೀಡ್‌ನಿಂದ ಪೂರೈಕೆ ಮಾಡುವ ಗ್ರಾಮಗಳಿಗೆ ಹೆಚ್ಚು ವಿದ್ಯುತ್ ತೆಗೆಯುತ್ತಿದ್ದು ಇದುವರೆಗೂ ಹಗಲಿನಲ್ಲಿ 4, ರಾತ್ರಿ 3 ತಾಸು ತ್ರೀಪೇಸ್ ಕೊಡುತ್ತ ಬಂದಿದ್ದು ಈಗ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಈ ಸಂದರ್ಭದಲ್ಲಿ ಆರು ತಾಸು ತೆಗೆದುು ಕೇವಲ ಒಂದು ತಾಸು ವಿದ್ಯುತ್ ನೀಡುತ್ತಿದ್ದಾರೆ. ಇದರಿಂದ ಬೆಳೆಗಳಿಗೆ ತೀವ್ರ ತೊಂದರೆ ಆಗುತ್ತದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಸಮಪರ್ಕ ವಿದ್ಯುತ್ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳಕ್ಕೆ ಆನವಟ್ಟಿ ಮೆಸ್ಕಾ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರಮೇಶ್ ಆಗಮಿಸಿ ಮೇಲಧಿಕಾರಿಗಳ ಆದೇಶದಂತೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ರೈತರ ಮನವೊಲಿಸಲು ಪ್ರಯತ್ನಿಸಿದರು. ನಮಗೆ ಹಗಲಿನಲ್ಲಿಯೇ ತ್ರೀ ಪೇಸ್ ವಿದ್ಯುತ್ ಏಳು ತಾಸು ಕೊಡಬೇಕು. ಅಲ್ಲದೆ ಸ್ಥಳಕ್ಕೆ ಬಳ್ಳಿಗಾವಿ ಕಚೇರಿಯ ಆಧಿಕಾರಿ ಬರಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ರಾತ್ರಿಯೂ ಮುಂದುವರಿಸಿದ್ದಾರೆ.
ಪ್ರತಿಭಟನೆಯಲ್ಲಿ ಬಸವರಾಜ್ ಭಾರಂಗಿ, ಶಂಕರಗೌಡ, ಹುಚ್ಚಪ್ಪ, ರಾಮಪ್ಪ, ನಾಗರಾಜ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net