

ಕೊರಟಗೆರೆ: ಸಾಗುವಳಿ ಚೀಟಿ, ಖಾತೆ, ಒತ್ತುವರಿ, ಪೌತಿ ಖಾತೆ ಸೇರಿ ಹಲವು ಕಂದಾಯ ಸಮಸ್ಯೆಗಳ ಪರಿಹಾರಕ್ಕೆ ತಾಲೂಕು ಕಚೇರಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿ ತಾಲೂಕಿನ ನೂರಾರು ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.
40 ವರ್ಷದಿಂದ ಉಳುಮೆ ಮಾಡುತ್ತಿರುವ ಹಲವು ರೈತರಿಗೆ ಸಾಗುವಳಿ ಚೀಟಿ ನೀಡಿಲ್ಲ. ಅದೇ ರೀತಿ ಹಣ ಕಟ್ಟಿ ಸಾಗುವಳಿ ಚೀಟಿ ಪಡೆದಿದ್ದರೂ ರೈತರಿಗೆ ಖಾತೆ ಮಾಡಿಕೊಡುತ್ತಿಲ್ಲ. ಅರ್ಜಿ ಸಲ್ಲಿಸಿದ ಅರ್ಹ ರೈತರನ್ನು ಬಿಟ್ಟು ಬೇರೆಯವರಿಗೆ ಭೂಮಿ ಮಂಜೂರು ಮಾಡಿದ್ದಾರೆ. ರೈತರಿಗೆ ಅನ್ಯಾಯವಾಗುತ್ತಿದ್ದು, ಯಾವುದೇ ತಾರತಮ್ಯ ಇಲ್ಲದೇ ಪಾರದರ್ಶಕವಾಗಿ ನ್ಯಾಯ ಸಿಗಬೇಕು ಎಂದು ರೈತಸಂಘ ಮತ್ತು ಹಸಿರುಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಒತ್ತಾಯಿಸಿದರು.
ಅಕ್ಕಾಜಿಹಳ್ಳಿ ಸರ್ವೇ ನಂ.33ರಲ್ಲಿ 40 ವರ್ಷದಿಂದ ಅನುಭೋಗದಲ್ಲಿದ್ದ ರೈತ ಕಾಮಣ್ಣ ಮತ್ತು ದಾಳಿನರಪ್ಪ ಎಂಬುವವರ ರೈತರ 4 ಎಕರೆ ಜಮೀನನ್ನು ಸ್ಥಳೀಯ ವಾಸಿಗಳಲ್ಲದ ಕಲಾವತಿ, ರಾಹುಲ್, ಉಮೇಶ್, ಸರಸ್ವತಿ ಎಂಬ ರೈತರ ಜಮೀನಲ್ಲಿದ್ದ ಬೆಳೆ ನಾಶ ಪಡಿಸಿ ನಮಗೆ ಸೇರಿದ ಭೂಮಿ ಎಂದು ಸಾಗುವಳಿ ಚೀಟಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಜಮೀನಿನಲ್ಲಿ ಶೆಡ್ ನಿರ್ಮಿಸಿಕೊಂಡಿದ್ದು, ಇದನ್ನು ತಾಲೂಕು ಆಡಳಿತ ತೆರವುಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.
ತಾಲೂಕು ಕಚೇರಿಯಲ್ಲಿ ಕೆಲ ಕಾಲ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಹಂತಕ್ಕೆ ತಲುಪಿತ್ತು. ರೈತರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಉಪವಿಭಾಗಾಧಿಕಾರಿ ಡಾ.ನಂದಿನಿ ದೇವಿ ಮಧ್ಯಪ್ರವೇಶಿಸಿ, ಸಮಸ್ಯೆಗಳಿಗೆ ಪರಿಹಾರ ನೀಡುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ರೈತ ಸಂಘದ ತಾಲೂಕು ಅಧ್ಯಕ್ಷ ಸಿದ್ದರಾಜು, ಕಾರ‌್ಯದರ್ಶಿ ಪ್ರಸನ್ನಕುಮಾರ್, ಉಪಾಧ್ಯಕ್ಷ ಪುಟ್ಟರಾಜು, ಜಿಲ್ಲಾ ಕಾರ‌್ಯದರ್ಶಿ ರುದ್ರೇಗೌಡ, ತಾಲೂಕು ಸಂಚಾಲಕ ಮಂಜುನಾಥ್, ಮಲ್ಲೇಶ್, ರೈತ ಮುಖಂಡರಾದ ಕುಮಾರನಾಯ್ಕ, ನಾಗಭೂಷಣ್, ಬಸವರಾಜು ಹಾಗೂ ರೈತರು ಇದ್ದರು.
ಕೊರಟಗೆರೆ ತಾಲೂಕಿನಲ್ಲಿ ಹಲವು ರೈತರ ಸಮಸ್ಯೆಗಳಿದ್ದು, ಎಲ್ಲ ರೈತರ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಸಲಾಗಿದೆ. ಪ್ರತಿಯೊಂದು ರೈತರ ಅರ್ಜಿಗಳನ್ನು ಪರಿಶೀಲಿಸಿ 20 ದಿನದೊಳಗಾಗಿ ಸಮಸ್ಯೆಯ ಗಂಭೀರತೆಯ ಆಧಾರದ ಮೇಲೆ ಎಲ್ಲವನ್ನೂ ವಿಲೇವಾರಿ ಮಾಡಲಾಗುವುದು. ಕೆಲವು ವಿವಾದದ ಭೂಮಿ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಅಂತಹವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಡಾ.ನಂದಿನಿ ದೇವಿ, ಉಪವಿಭಾಗಾಧಿಕಾರಿ, ಮಧುಗಿರಿ ನಮಗೆ ಭೂಮಿ ಬೇಕು, ನಾನು ಉಳುಮೆ ಮಾಡುತ್ತಿದ್ದೇನೆ ಎಂದು ಹಲವರು ಸಾಗುವಳಿ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಮೀಸಲು ಪ್ರದೇಶಗಳನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ, ಎಲ್ಲವನ್ನೂ ಪರಿಶೀಲಿಸಿ ಯಾವ ಪ್ರದೇಶ ಮೀಸಲು ಪ್ರದೇಶದಿಂದ ಹೊರಗಿದೆ ಮತ್ತು ಯಾರು ಅರ್ಹರು ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ಬಿ.ಎಂ ಗೋವಿಂದರಾಜು, ತಹಸೀಲ್ದಾರ್, ಕೊರಟಗೆರೆ