

ನೆಲಮಂಗಲ : ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಹತ್ತಿರದ ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಎನ್.ಶ್ರೀನಿವಾಸ್ ಭೇಟಿ ಮಾಡಿ ಗುರುವಾರ ಪರಿಶೀಲನೆ ನಡೆಸಿದರು. ‘ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಂಡಿರುವ ತಾಲೂಕಿನ ರೈತರ ಮಾಹಿತಿ ಜತೆಗೆ ರಾಗಿ ತೂಕ ಹಾಗೂ ಗುಣಮಟ್ಟ ಪರಿಶೀಲನೆ ಮಾಡಿದರು.
ದೂರದ ಊರುಗಳಿಂದ ಟ್ರ್ಯಾಕ್ಟರ್ಗಳಲ್ಲಿ ರಾಗಿ ತುಂಬಿಕೊಂಡು ಖರೀದಿ ಕೇಂದ್ರಕ್ಕೆ ಬರುವ ರೈತರಿಗೆ ಊಟದ ವ್ಯವಸ್ಥೆ ಜತೆಗೆ ಕುಡಿಯುವ ನೀರು ಕಲ್ಪಿಸಲಾಗಿದ್ದು, ರಾಗಿ ವಿತರಣೆ ಮಾಡುತ್ತಿರುವ ರೈತರಿಂದ ಶಾಸಕರು ಅಭಿಪ್ರಾಯ ಪಡೆದುಕೊಂಡರು. ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ತಾಲೂಕಿನಾದ್ಯಂತ ಹಲವು ರಾಗಿ ಬೆಳೆಯುವ ರೈತರಿದ್ದು, ಕೇಂದ್ರಕ್ಕೆ ಗುಣಮಟ್ಟದ ರಾಗಿ ಹಾಕಬೇಕು. ಸರ್ಕಾರ ಒಂದು ಕ್ವಿಂಟಲ್ಗೆ 4,290 ರೂ. ಕೊಟ್ಟು ಖರೀದಿಸುತ್ತಿದೆ. ಆದ್ದರಿಂದ ರೈತರು ಗುಣಮಟ್ಟದ ರಾಗಿ ನೀಡಬೇಕು. ಖರೀದಿ ಕೇಂದ್ರದ ಅಧಿಕಾರಿಗಳ ಸೂಚನೆಯಂತೆ ಬರಬೇಕಿದೆ. ರಾಗಿ ಖರೀದಿ ಕೇಂದ್ರದಲ್ಲಿ ಯಾವುದೇ ತೊಂದರೆಯಾಗದಂತೆ ತಾಲೂಕಿನ ರೈತರನ್ನು ನೋಡಿಕೊಳ್ಳಲಾಗುತ್ತಿದೆ. ರಾಗಿ ಖರೀದಿ ಕೇಂದ್ರದ ಬಳಿ ಊಟ, ನೀರು, ಪೆಂಡಾಲ್, ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ ಎಂದರು.
ಉಚಿತ ಊಟದ ವ್ಯವಸ್ಥೆ : ವಿಧಾನಸಭಾ ಚುನಾವಣೆಯಲ್ಲಿ ೇತ್ರಕ್ಕೆ ಕಾಂಗ್ರೆಸ್ ವೀಕ್ಷಕರಾಗಿ ಆಗಮಿಸಿದ್ದ ಹಾಲಿ ಶಾಸಕ ಎನ್.ಶ್ರೀನಿವಾಸ್ ರಾಗಿ ಖರೀದಿ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ರಾಗಿ ತರುವ ರೈತರಿಗೆ ಅಗತ್ಯ ಇಲ್ಲದೆ ಪರದಾಡುತ್ತಿದ್ದನ್ನು ಕಂಡಿದ್ದು, ಉಚಿತ ಊಟ ಉಪಹಾರ ವ್ಯವಸ್ಥೆ ಮಾಡಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಆದ್ದರಿಂದ ಪ್ರತಿ ವರ್ಷ ರಾಗಿ ಖರೀದಿ ಮಾಡುವ ವೇಳೆ ಉಚಿತವಾಗಿ ಊಟ ಉಪಹಾರದ ವ್ಯವಸ್ಥೆ ಮಾಡಿಕೊಂಡು ಬರುತ್ತಿದ್ದು ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳಿಗೆ ಸೂಚನೆ : ರಾಗಿ ನೋಂದಣಿ ಹಾಗೂ ಖರೀದಿ ವಿವರ ಪರಿಶೀಲಿಸಿ, ತೂಕ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ರೈತರಿಗೆ ಕಾಲ ಕಾಲಕ್ಕೆ ಸರಿಯಾದ ಮಾಹಿತಿ ನೀಡುವಂತೆ ಕಾರ್ಯ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು. ರಾಗಿ ಖರೀದಿ ಅಧಿಕಾರಿ ನಾರಾಯಣ್, ನೆ.ಯೋ.ಪ್ರಾಧಿಕಾರ ಸದಸ್ಯ ಬಿ.ಜಿ.ವಾಸು, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲಿಟರಿ ಮೂರ್ತಿ, ಟಿಎಪಿಸಿಎಂಎಸ್ ನಿರ್ದೇಶಕ ವೀರಮಾರೇಗೌಡ, ಗ್ರಾಪಂ ಮಾಜಿ ಅದ್ಯಕ್ಷ ಕೆಂಪರಾಜು, ಮುಖಂಡ ಎಂ.ಕೆ.ನಾಗರಾಜು, ಮುನಿಯಪ್ಪ, ಡಾಬಾರಾಜಣ್ಣ ಇತರರು ಇದ್ದರು.