ರೈತರು ಸಾವಯವ ಗೊಬ್ಬರ ತಯಾರಿಸಿ ಬಳಸಲಿ

MDG KSHETROTSAVA
Published on

ಮುಂಡರಗಿ: ರೈತರು ಸಾವಯವ ಗೊಬ್ಬರ ಖರೀದಿಸದೇ ತಾವೇ ತಯಾರಿಸಿ ಬಳಸಬೇಕು. ಇದರಿಂದ ವ್ಯವಸಾಯದ ಖರ್ಚು ಕಡಿಮೆಗೊಳಿಸಬಹುದು ಎಂದು ಗದಗ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕಿ ಮೇಘನಾ ನಾಡಗೇರ ಹೇಳಿದರು.

ತಾಲೂಕಿನ ಪೇಠಾಲೂರ ಗ್ರಾಮದ ರೈತ ಗುದಡಪ್ಪ ಸೂಡಿಯವರ ಜಮೀನಿನಲ್ಲಿ 2024-25ನೇ ಸಾಲಿನ ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ ಹಿಂಗಾರು ಹಂಗಾಮಿನ ಕಡಲೆ ಮತ್ತು ಜೋಳದ ಬೆಳೆಯ ಕ್ಷೇತ್ರೋತ್ಸವ ಮತ್ತು ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ಮಣ್ಣು ಆರೋಗ್ಯದ ಬಗ್ಗೆ ರೈತರಿಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಬಸವರಾಜ ನಾವಿ ಮಾತನಾಡಿ, ಕೃಷಿ ವಿಶ್ವವಿದ್ಯಾಲಯ ಬಿಡುಗಡೆ ಮಾಡುವ ಹೊಸ ತಳಿಗಳನ್ನು ಬೆಳೆಯಬೇಕು. ಸಾವಯವ ಕೃಷಿ ಅಳವಡಿಸಿಕೊಂಡರೆ ಮಾತ್ರ ಮಣ್ಣನ್ನು ಜೀವಂತವಾಗಿಟ್ಟುಕೊಳ್ಳಬಹುದು ಎಂದರು.

ಡಂಬಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ಇಲಾಖೆಯಿಂದ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮವ್ವ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಆತ್ಮಾ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕ ಗೌರಿಶಂಕರ ಸಜ್ಜನರ, ತಾಂತ್ರಿಕ ಸಹಾಯಕ ಅಕ್ಕಮಹಾದೇವಿ ಶಲವಡಿ, ಬಾಬಜಿ ಹಡಪದ, ನಾಗರಾಜ ಭೋವಿ, ಮಾರುತಿ ರಾಠೋಡ, ಬಸವರಾಜ ಕೊಪ್ಪಳ, ತಿಮ್ಮಣ್ಣ ರಾಟಿ, ನಿಂಗಪ್ಪ ಹೊಸಮನಿ, ಪ್ರಗತಿಪರ ರೈತರಾದ ಶಿವಾನಂದ ಚಾಕಲಬ್ಬಿ, ಅಶೋಕ ಕಬ್ಬೇರಳ್ಳಿ, ಶ್ರೀಕಾಂತ ತಿಮ್ಮಾಪೂರ, ಸಿದ್ದು ಕರಿಗೌಡ್ರ, ಶರಣಪ್ಪ ಭೂತರಡ್ಡಿ, ತೋಟಪ್ಪ ಶಿವಶಟ್ರ ಹಾಗೂ ಸ್ವ-ಸಹಾಯ ಸಂಘದ ಮಹಿಳೆಯರು, ಕೃಷಿ ಸಖಿಯರು ಉಪಸ್ಥಿತರಿದ್ದರು.

ಗುಡದಪ್ಪ ಲಿಂಗಶೆಟ್ಟರ್ ಹಾಗೂ ನಿಂಗಪ್ಪ ಹೊಸಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net