ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿ

17 yelandur 01
Published on

 ಯಳಂದೂರು: ದೇವನಹಳ್ಳಿಯಲ್ಲಿ ರೈತರ ಜಮೀನು ಕಬಳಿಸುವ ರಾಜ್ಯ ಸರ್ಕಾರದ ಹುನ್ನಾರ ಖಂಡಿಸಿ ಜು.25 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ರೈತರು ಭಾಗವಹಿಸಲಿದ್ದು, ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ರೈತ ಸಂಘದ ರಾಜ್ಯ ರಾಜಕೀಯ ಮಂಡಳಿ ಸದಸ್ಯೆ ಚುಕ್ಕಿ ನಂಜುಂಡಸ್ವಾಮಿ ಕರೆ ನೀಡಿದರು.

ತಾಲೂಕಿನ ಹೊನ್ನೂರು ಗ್ರಾಮದ ಮಠದ ಮುಂಭಾಗ ಮಂಗಳವಾರ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹೊನ್ನೂರು ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಅಧೀನ ಸಂಸ್ಥೆಯಾದ ಕೆಐಡಿಬಿ, ರೈತರ 1770 ಎಕರೆ ಜಮೀನನ್ನು ವಶಪಡಿಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ಇದಕ್ಕೆ ರೈತರ ವಿರೋಧವಿದೆ. ಹಾಗಾಗಿ, ಯಾವುದೇ ಕಾರಣಕ್ಕೂ ಇಲ್ಲಿ ಕೈಗಾರಿಕೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ. 4 ವರ್ಷಗಳ ಹಿಂದೆ ಬಿಜೆಪಿ ಸರ್ಕಾರದಲ್ಲಿ ಈ ಯೋಜನೆ ರೂಪಿಸಲಾಗಿತ್ತು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ರೈತರ ಪರವಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನ್ಯಾಯ ದೊರಕಿಸಿಕೊಡುವ ಭರವಸೆಯನ್ನು ನೀಡಿದ್ದರು. ಈಗ ಅವರೇ ಸ್ವತಃ ಮುಖ್ಯಮಂತ್ರಿಯಾಗಿದ್ದಾರೆ. ನೂರಾರು ರೈತರು ಇಲ್ಲಿ ದ್ರಾಕ್ಷಿ, ಹೂವು ಬೆಳೆಯುತ್ತಿದ್ದಾರೆ. ಉತ್ತಮ ಗುಣಮಟ್ಟದ ದ್ರಾಕ್ಷಿ ಇಲ್ಲಿ ಬೆಳೆಯಲಾಗುತ್ತಿದೆ. ಹೈನುಗಾರಿಕೆಗೆ ಇಲ್ಲಿನ ಮುಖ್ಯ ಕಸುಬಾಗಿದೆ. ಭೂಮಿ ನೀಡಿ ಎಂದು ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಇದನ್ನು ಪಡೆದೇ ಪಡೆಯುತ್ತೇವೆ. ನಾವು ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ವಿದೇಶಿ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳುತ್ತಿದ್ದಾರೆ. ಹಾಗಾಗಿ, ರೈತರ ಬೆಂಬಲಕ್ಕೆ ನಾವು ನಿಲ್ಲಬೇಕಿದೆ. ಈ ಉದ್ದೇಶದಿಂದ ಜೂ. 25 ರಂದು ರಾಜ್ಯದ ರೈತರು ಬೆಂಗಳೂರಿನ ದೇವನಹಳ್ಳಿಯಲ್ಲಿ ಜಮಾವಣೆಗೊಳ್ಳುತ್ತಿದ್ದು, ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಯುವ ರೈತರು, ದಿಕ್ಕು ತಪ್ಪಿಸುವ ಸರ್ಕಾರದ ವಿರುದ್ಧ ಹೋರಾಡಿ:

ನಮ್ಮ ದೇಶದಲ್ಲಿ ಶೇ. 67ರಷ್ಟು ಯುವಕರು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಯುವ ರೈತರು ಹೆಚ್ಚಾಗಿದ್ದಾರೆ. ನಾವು ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ರೈತರ ಸಮಸ್ಯೆಗಳನ್ನು ಅರಿತು ಇದನ್ನು ನಿವಾರಿಸುವ ಕ್ರಮ ವಹಿಸಬೇಕು. ನಮ್ಮನ್ನಾಳುವ ಸರ್ಕಾರಗಳು ರೈತರಿಗೆ ಮೋಸ ಮಾಡುತ್ತಲೇ ಬರುತ್ತಿವೆ. ಈ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಪ್ರತಿಭಟಿಸಬೇಕು. ರೈತರಿಗೆ ಮಾರಕವಾಗುವ ಕಾನೂನುಗಳನ್ನು ರೂಪಿಸಿದ್ದಲ್ಲಿ ಇದನ್ನು ವಿರೋಧಿಸಬೇಕು. ಕೋವಿಡ್ ಕಾಲದಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಮೂರು ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ಉತ್ತರ ಭಾರತದ ಲಕ್ಷಾಂತರ ರೈತರು 13 ತಿಂಗಳು ನಿರಂತರ ಪ್ರತಿಭಟನೆ ನಡೆಸಿದರು. ಇದರಲ್ಲಿ 700 ರೈತರು ತಮ್ಮ ಪ್ರಾಣ ಕಳೆದುಕೊಂಡರು. ನಂತರ ಸರ್ಕಾರ ಈ ಕಾಯ್ದೆಗಳನ್ನು ವಾಪಸ್ ಪಡೆಯಿತು. ಈ ರೀತಿಯ ಸಮೂಹಿಕ ನಾಯಕತ್ವ ನಮಗೆ ಅಗತ್ಯವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಜಮೀನನ್ನು ಉಳಿಸಿಕೊಳ್ಳಬೇಕಾದರೆ ಈ ಹೋರಾಟ ಅನಿವಾರ್ಯವಾಗಿದ್ದು, ಈ ಬಗ್ಗೆ ಹಸಿರು ಶಾಲು ಹಾಕಿಕೊಂಡ ಯುವ ರೈತರು ಹೆಚ್ಚು ಜಾಗೃತರಾಗಬೇಕು. ನಮ್ಮ ಮತವನ್ನು ಹಣಕ್ಕೆ, ಇತರ ಆಮಿಷಗಳಿಗೆ ಬಲಿಕೊಡಬಾರದು ಎಂದು ಕಿವಿಮಾತು ಹೇಳಿದರು.

ಸಾಹುಕಾರ್ ಎಚ್.ಎಸ್.ಮಹೇಂದ್ರ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮಂಜುಕಿರಣ್ ಮಾತನಾಡಿದರು. ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಪ್ರಸನ್ನ, ಸಿದ್ದಲಿಂಗಸ್ವಾಮಿ, ಅಂಬಳೆ ಶಿವಕುಮಾರ್, ಮಾಡ್ರಳ್ಳಿ ಪಾಪಣ್ಣ, ನಟರಾಜು, ಈಶ್ವರಪ್ರಭು, ಕರಿಯಪ್ಪ, ಮಹೇಶ್, ಎ.ಎನ್. ಶಿವಪ್ರಸಾದ್, ಮಹದೇವಸ್ವಾಮಿ, ಶಾಂತಪ್ಪ ಸೇರಿದಂತೆ ನೂರಾರು ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net