

ಸೋಮವಾರಪೇಟೆ: ತೋಳೂರು ಶೆಟ್ಟಳ್ಳಿ ಗ್ರಾಮದ ನಡ್ಲಕೊಪ್ಪ ಸಮಿತಿಯ ಸಭೆಯನ್ನು ಗ್ರಾಮದ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಗ್ರಾಮದ ನಿವಾಸಿ, ಮಾಜಿ ಸೈನಿಕ ಎಚ್.ಎ.ವೆಂಕಟೇಶ್, ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕೆ.ಶೇಖರ್, ಪ್ರಸಕ್ತ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಿಕಾಸ್ ಅವರನ್ನು ಗೌರವಿಸಲಾಯಿತು.
ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಕೆ.ಮಾಚಯ್ಯ ಮಾತನಾಡಿ, ಕೃಷಿಕರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ವಿದ್ಯೆ ನಿಜವಾದ ಆಸ್ತಿಯಾಗಿದ್ದು, ವಿದ್ಯಾವಂತ ದೇಶದ ಸಂಪತ್ತು ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಸಾಧನೆ ಮಾಡಿ, ಒಳ್ಳೆಯ ಉದ್ಯೋಗವನ್ನು ಪಡೆದು ಕುಟುಂಬಕ್ಕೆ ಮತ್ತು ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಆಶಿಸಿದರು. ಗ್ರಾಮದ ರಸ್ತೆ ಹಾಳಾಗಿದೆ, ಸೇತುವೆ ಶಿಥಿಲಗೊಂಡಿದೆ, ಕುಡಿಯುವ ನೀರಿನ ವ್ಯವಸ್ಥೆ ತಲೆದೋರಿದೆ. ಈ ಬಗ್ಗೆ ಶಾಸಕರ ಗಮನ ಸೆಳೆಯಬೇಕು ಎಂದು ಹೇಳಿದರು.
ಗ್ರಾಮ ಸಮಿತಿಯ ಕಾರ್ಯದರ್ಶಿ, ವಿ.ವಿ.ಸೋಮಯ್ಯ ಖಜಾಂಚಿ ಎಂ.ಕೆ ಧರ್ಮಪ್ಪ, ಗ್ರಾಮದ ಪ್ರಮುಖರಾದ ಟಿ.ಕೆ.ಸುಬ್ಬಯ್ಯ, ಎಂ.ಬಿ ರಾಜಪ್ಪ, ಎಜ್.ಎ.ಗಣೇಶ್, ಕುಮಾರಪ್ಪ, ಶಾಂತಪ್ಪ, ಶಿವಕುಮಾರ್ ಇತರರು ಇದ್ದರು.