ರೈತರು ಸಾವಯವ ಬೇಸಾಯ ಪದ್ಧತಿ ಅನುಸರಿಸಲಿ

HUN-SEP-13-3(KARANAKUPPE GP PROGRAMME)
ಹುಣಸೂರು ತಾಲೂಕು ಕರಣಕುಪ್ಪೆ ಗ್ರಾ.ಪಂ.ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ದಿವ್ಯಾ, ಪಾಪಣ್ಣ, ಪಿಡಿಒ ಪ್ರದೀಪ್, ಜಯಕುಮಾರ್ ಇತರರಿದ್ದರು.
Published on

ಹುಣಸೂರು: ಬೀಜ ಸಂಸ್ಕರಣೆಯಿಂದ ಬೆಳೆಗಳಿಗೆ ಯಾವುದೇ ತೆರನಾದ ರೋಗಬಾಧೆಗಳು ಕಾಣಿಸಿಕೊಳ್ಳುವುದಿಲ್ಲವೆಂದು ಮೈಸೂರು ಕೃಷಿ ವಿಜ್ಞಾನ ಕೇಂದ್ರದ ಬೀಜ ಸಂಸ್ಕರಣಾ ಸಂಶೋಧನಾ ತಜ್ಞೆ ದಿವ್ಯಾ ತಿಳಿಸಿದರು.

ತಾಲೂಕಿನ ಕರಣಕುಪ್ಪೆ ಗ್ರಾಮಪಂಚಾಯಿತಿ ಕೇಂದ್ರದಲ್ಲಿ ಶನಿವಾರ ಕೃಷಿ ಇಲಾಖೆ, ಐಟಿಸಿ ಮತ್ತು ಔಟ್‌ರೀಚ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರೈತರಿಗೆ ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀಜ ಸಂಸ್ಕರಣೆಗೆ ಅದರದ್ದೇ ಆದ ವಿಧಾನಗಳಿದ್ದು. ಅವುಗಳನ್ನು ಅನುಸರಿಸಿದಲ್ಲಿ ರೈತರಿಗೆ ಆರ್ಥಿಕವಾಗಿ ಲಾಭವಾಗಲಿದೆ. ಕೀಟನಾಶಕಗಳನ್ನು ಬಳಸದೆ ಸಾವಯವ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಬಹುದಾದ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಐಟಿಸಿ ಎಂಎಸ್ಕೆ ಮತ್ತು ಔಟ್‌ರೀಚ್ ಸಂಸ್ಥೆ ಮುಂದೆ ಬಂದಿದ್ದು, ಇವರುಗಳ ಸಹಕಾರವನ್ನು ನಮ್ಮ ರೈತರು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.

ಕೃಷಿ ಉಪನಿರ್ದೇಶಕ ಕಚೇರಿ ತಾಂತ್ರಿಕ ಕೃಷಿ ಅಧಿಕಾರಿ ಜಯಕುಮಾರ್ ಮಾತನಾಡಿ, ರೈತರು ಬೀಜೋಪಚಾರ ಪದ್ಧತಿಯಲ್ಲಿ ಭತ್ತ, ರಾಗಿ, ಜೋಳ, ಅಲಸಂದೆ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿ ತಡೆಗಟ್ಟುವುದರ ಜತೆಗೆ ಫಲವತ್ತಾದ ಮಣ್ಣನ್ನು ರಕ್ಷಿಸಬಹುದು ಹಾಗೂ ಸಾಮಾಜಿಕ ಮತ್ತು ಜೈವಿಕ ಅರಣ್ಯ ಬೆಳೆಗಳನ್ನು ಕೂಡ ಬೆಳೆಯಬಹುದೆಂದರು.

ಕಾರ್ಯಕ್ರಮದಲ್ಲಿ ಔಟ್ ರೀಚ್ ಸಂಸ್ಥೆಯ ಯೋಜನಾ ಸಮನ್ವಯಾಧಿಕಾರಿ ನಂಜುಂಡಸ್ವಾಮಿ ಮಾತನಾಡಿ, ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ಕೆರೆಹೂಳು ತೆಗೆಯುವ ಕಾರ್ಯ, ರೈತರಿಗೆ ಸಸಿಗಳನ್ನು ಒದಗಿಸುವ ಮತ್ತು ಹವಾಮಾನ ಬದಲಾವಣೆಯಲ್ಲಿ ಬೆಳೆಗಳ ಮೇಲೆ ಬೀರುವ ಪರಿಣಾಮದ ತಡೆಗಟ್ಟುವಿಕೆ ಕುರಿತು ಮಾಹಿತಿ ನೀಡಿದರು. ಕರಣಕುಪ್ಪೆ ಗ್ರಾ.ಪಂ.ಅಧ್ಯಕ್ಷ ಪಾಪಣ್ಣ ಮಾತನಾಡಿದರು.

ಪಿಡಿಒ ಪ್ರದೀಪ್, ರೈತರಾದ ಕಣಗಾಲುರಾಘವೇಂದ್ರ, ಕೆ.ಎಂ.ರಾಜು, ರೈತಕ್ಷೇತ್ರ ಪಾಠಶಾಲೆ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಮತ್ತು ಕೃಷಿ ಸಖಿಯರು, ವಿವಿಧ ಸಂಘಸಂಸ್ಥೆಗಳ ಸಿಬ್ಬಂದಿ ರಂಗಸ್ವಾಮಿ, ಸಾಗರ್, ಪ್ರಮೋದ್, ದಿಲೀಪ್, ಕಾರ್ತಿಕ್ ಮತ್ತು ರೈತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net